ವಿಜಯವಾಣಿ ಸುದ್ದಿಜಾಲ ಸಿಂಧನೂರು
ಸಂಗೀತ, ಸಾಹಿತ್ಯ ಹಾಗೂ ಅಧ್ಯಾತ್ಮ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಮೂರುಮೈಲ್ ಕ್ಯಾಂಪಿನ ರಂಭಾಪುರಿ ಶಾಖಾ ಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀ ಗುರು ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಸಂಗೀತ ಸೇವಾ ಸಮಿತಿಯಿಂದ ಆಯೋಜಿಸಿದ್ದ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳ 16ನೇ ಪುಣ್ಯಸ್ಮರಣೋತ್ಸವ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಜೀವನದ ಎಲ್ಲ ಕಷ್ಟಗಳಿಗೆ ಸಂಗೀತದಲ್ಲಿ ಮದ್ದು ಇದೆ. ಸಂಗೀತದಿಂದ ಮನಸ್ಸು ಶಾಂತಗೊಳ್ಳುತ್ತದೆ ಎಂದರು.
ಸಮಿತಿ ಅಧ್ಯಕ್ಷ ಬಸವರಾಜ ಮೋತಿ ಮಾತನಾಡಿ, ನಮ್ಮ ಕುಟುಂಬಕ್ಕೆ ಸಂಗೀತ ಸೇವೆಯೇ ಆಸರೆಯಾಗಿದೆ. ಪುಟ್ಟರಾಜ ಗವಾಯಿಗಳ ಆಶೀರ್ವಾದದಿಂದ ಸೇವೆ ನಿರಂತರ ಸಾಗಿದೆ ಎಂದರು.
ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕುಮಾರ್ ಪುಟ್ಟರಾಜ್ ತಂಡ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ನಾರಾಯಣಪ್ಪ ಮಾದಿನಾಳ ತಂಡ ತತ್ವಪದ ಗಾಯನ ಪ್ರಸ್ತುತಪಡಿಸಿತು. ಭೋಜರಾಜ್ ತಂಡ ಜನಪದ ಸಂಗೀತ, ಮಲ್ಲಮ್ಮ ಬಸವರಾಜ್ ಮೋತಿ ಹಾಗೂ ಶರಣು ಕುಮಾರ್ ಜನಪದ ಗೀತೆಗಳನ್ನು ಹಾಡಿದರು. ಶಾಂತವೀರಯ್ಯ ಸ್ವಾಮಿ ದಿಲ್ರುಬಾ, ರಾಮಾಂಜನೇಯಲು ಕ್ಲಾರಿಯೋನೆಟ್ ಹಾಗೂ ಬಸವರಾಜ ಮೋತಿ ತಬಲಾ ವಾದನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಮಾಜಿ ಯೋಧ ವೀರಭದ್ರಯ್ಯ ಎಸ್., ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ, ಅಮರೇಶ ಹಸಮಕಲ್, ಪಂಪಯ್ಯಸ್ವಾಮಿ ಸಾಲಿಮಠ, ಬಿ.ಸಿ.ಅಕ್ಕನ ಬಳಗದ ಪಾರ್ವತಮ್ಮ, ಚನ್ನಯ್ಯಸ್ವಾಮಿ ಕಲ್ಮಠ ಇದ್ದರು.