ಲಿಂಗಸುಗೂರು: ಇಡಿ ನೂರು ದಾಳಿಗಳಾದರೂ ಸಚಿವ ಸತೀಶ ಜಾರಕಿಹೊಳಿ ಕುಗ್ಗುವುದಿಲ್ಲ ಎಂದು ಎಂಎಲ್‌ಸಿ ಶರಣಗೌಡ ಪಾಟೀಲ ಬಯ್ಯಪುರ ಸೋಮವಾರ ಹೇಳಿದರು.
ಡಾ.ಅಂಬೇಡ್ಕರ್ ವೃತ್ತದಲ್ಲಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಜಾರಿ ನಿರ್ದೇಶನಾಲಯ ನಡೆಸಿದ ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು, ತಾಲೂಕು ಅಹಿಂದ, ವಾಲ್ಮೀಕಿ ಸಮಾಜ, ಸತೀಶ ಜಾರಕಿಹೊಳಿ ಅಭಿಮಾನಿಗಳು ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಸಭೆಯನ್ನುದೇಶಿಸಿ ಮಾತನಾಡಿದರು.
ಈ ಮೊದಲು ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಇಡಿ ದಾಳಿ ನಡೆಸಿತ್ತು. ಏನೂ ಮಾಡಲಾಗಲಿಲ್ಲ. ಈಗ ಮುಂದಿನ ಮುಖ್ಯಮಂತ್ರಿಯಾಗಲಿರುವ ಸತೀಶ ಜಾರಕಿಹೊಳಿ ಅವರನ್ನು ತೇಜೋವಧೆ ಮಾಡಲು ಅವರ ವಿರುದ್ಧ ಇಡಿ ದಾಳಿ ನಡೆಸಿದ್ದಾರೆ. ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ನೂರಾರು ಅನಾಥಾಶ್ರಮ ಶಾಲೆಗಳು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಐಎಎಸ್, ಕೆಎಎಸ್ ಕೋಚಿಂಗ್ ಕೇಂದ್ರಗಳನ್ನು ತೆರೆದ ಮುತ್ಸದಿ ರಾಜಕಾರಣಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಂಥಾ ದಾಳಿ ನಡೆದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಪಾಮಯ್ಯ ಮುರಾರಿ ಮಾತನಾಡಿ, ಸತೀಶ ಜಾರಕಿಹೊಳಿ ಮೇಲೆ ನಡೆದ ದಾಳಿಯನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ರೈತರ 72 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದೆಂದು ಕಾಂಗ್ರೆಸ್ ಮುಖಂಡರ ಮೇಲೆ ಬಿಜೆಪಿ ಇಡಿ ದಾಳಿ ಮಾಡಿಸುತ್ತಿದೆ. ಇಡಿ, ಐಟಿ, ಸಿಬಿಐ ನಂಥ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದರು.
ಕೆಪಿಸಿಸಿ ಸದಸ್ಯ ಅಮರಗುಂಡಪ್ಪ ಮೇಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಸಂಜೀವಪ್ಪ ಹುನಕುಂಟಿ ಮಾತನಾಡಿದರು. ನಯೋಪ್ರಾ ಅಧ್ಯಕ್ಷ ಭೂಪನಗೌಡ ಪಾಟೀಲ, ಆದೇಶ ನಾಯಕ, ಮುದುಕಪ್ಪ ವಕೀಲ, ಅಮರೇಶ ಹಿರೇ ಹೆಸರೂರು, ಗುಂಡಪ್ಪ ನಾಯಕ, ಅಮಜದ್ ಹಟ್ಟಿ, ಎಸ್.ಆರ್.ರಸೂಲ, ವೆಂಕಟೇಶ ಗುತ್ತೇದಾರ್, ನಿಂಗಪ್ಪ ಪರಂಗಿ, ವಿಜಯಲಕ್ಷ್ಮಿ ದೇಸಾಯಿ, ಖಾಜಾಹುಸೇನ ಪೂಲವಾಲೆ ಇದ್ದರು.
ದೊಡ್ಡ ಹನಮಂತ ದೇವಸ್ಥಾನದಿಂದ ಗಡಿಯಾರ ಚೌಕ್ ಮೂಲಕ ಬಸ್ ನಿಲ್ದಾಣ ಸರ್ಕಲ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.