ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ಕರಡಕಲ್ಲ ಗ್ರಾಮದ ಸ.ನಂ. 303/2ರ ಆಶ್ರಯ ಕಾಲನಿಯಲ್ಲಿ ಅಕ್ರಮವಾಗಿ ನೀಡಿರುವ ಖಾತಾ ನಕಲುಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸಹಾಯಕ ಆಯುಕ್ತ ನಾಗೇಂದ್ರಬಾಬು ಕುಮಾರಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
1998-99ನೇ ಸಾಲಿನಲ್ಲಿ ಆಶ್ರಯ ಸಮಿತಿಯಿಂದ ಕರಡಕಲ್ಲ ಸ.ನಂ.303/2ರಲ್ಲಿ ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಲಾಗಿದೆ. ಅದೇ ಸಮಯದಲ್ಲಿ ಸಾರ್ವಜನಿಕರ ಉದ್ದೇಶಕ್ಕಾಗಿ, ಮಾದಿಗ ಸಮುದಾಯ ಭವನ ಹಾಗೂ ಸಾರ್ವಜನಿಕರ ಬಳಕೆಗಾಗಿ ಹೆಚ್ಚುವರಿ ಜಾಗವನ್ನು ಮೀಸಲಿರಿಸಿ ಪುರಸಭೆ ಆಸ್ತಿ ಎಂದು ನಾಮಫಲಕ ಹಾಕಲಾಗಿತ್ತು. ಪುರಸಭೆಯ ಕೆಲ ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತಾ ನಕಲು ಮಾಡಿಕೊಟ್ಟಿದ್ದಾರೆ.
ಅಕ್ರಮ ನಡೆದಿರುವ ಕುರಿತು 2024ರ ಡಿ.21 ಮತ್ತು 2026ರ ಆ.7ರಂದು ಪುರಸಭೆ ಮುಖ್ಯಾಧಿಕಾರಿಗೆ ದೂರು ನೀಡಲಾಗಿದೆ. 2026ರ ಆ.20ರಂದು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಲಾಗುತ್ತಿದೆ.
ಸಾರ್ವಜನಿಕ ಆಸ್ತಿ ಕಬಳಿಕೆಗೆ ಅವಕಾಶ ಮಾಡಿಕೊಟ್ಟ ಪುರಸಭೆ ಮುಖ್ಯಾಧಿಕಾರಿ, ಕಂದಾಯ ಅಧಿಕಾರಿ, ಹಾಗೂ ವಿಷಯ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪುರಸಭೆಯಿಂದ ನಾಮಫಲಕ ಅಳವಡಿಸಿ ಕಾಂಪೌಂಡ್ ನಿರ್ಮಿಸಬೇಕು ಎಂದು ಒತ್ತಾಯಿಲಾಯಿತು.