ರಾಯಚೂರಿನ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ ಅಧ್ಯಕ್ಷತೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಯೋಜನಾ ನಿರ್ದೇಶಕ ಶರಣಬಸವರಾಜ್, ಮುಖ್ಯ ಲೆಕ್ಕಧಿಕಾರಿ ವಿಜಯಶಂಕರ, ಮುಖ್ಯ ಯೋಜನಾಧಿಕಾರಿ ಟಿ.ರೋಣಿ, ರಾಜೀವ್ ಗಾಂಧೀ ವಸತಿ ನಿಗಮದ ಸಹಾಯಕ ಪ್ರದಾನ ವ್ಯವಸ್ಥಾಪಕ ಉಸ್ಮಾನ್ ಪಾಷಾ ಇದ್ದರು.
ಗ್ರಾಮೀಣ ಪ್ರದೇಶದಲ್ಲಿ ಸಶಕ್ತ ಯುವಕರನ್ನು ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಭಾರತ್ ಜೋಡೋ ಯುವ ಸಂಘಗಳ ರಚನೆಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸಬೇಕೆಂದು ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಯುವಕರನ್ನು ಸಂಘಟಿಸಲು ಮತ್ತು ಸರ್ಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಯುವ ಸಂಘಗಳನ್ನು ರಚಿಸಲು ಸರ್ಕಾರ ನಿರ್ಧರಿಸಿದೆ.
ಪ್ರತಿ ಸಂಘಕ್ಕೆ 10 ಲಕ್ಷ ರೂ. ಮಂಜೂರಾಗುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಸಂಘ ರಚನೆ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಯುವಕ ಯುವತಿಯನ್ನು ಸಂಘಟಿಸಿ, ಭಾರತ್ ಜೋಡೋ ಯುವ ಸಂಘ ರಚನೆ ಮತ್ತು ಕಾರ್ಯಚಟುವಟಿಕೆಗೆ ಚಾಲನೆ ನೀಡಬೇಕು. ಪ್ರತಿ ತಿಂಗಳು ಕನಿಷ್ಠ ಒಂದು ಬಾರಿಯಾದರೂ ಯುವ ಸಂಘದ ಪದಾಧಿಕಾರಿಗಳ ಸಭೆ ನಡೆಸಿ, ಶ್ರಮದಾನ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕು. ಜಿಲ್ಲಾದ್ಯಂತ 1452 ಸಂಘಗಳನ್ನುರಚಿಸಲಾಗಿದೆ. ಆ.25 ರೊಳಗೆ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸಂಘಗಳನ್ನು ರಚಿಸಿ, ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸಬೇಕು ಎಂದರು.
ತೆರಿಗೆ ವಸೂಲಾತಿಗೆ ಗಮನಹರಿಸಬೇಕು.
ಆರ್ಥಿಕ ವರ್ಷದ 5 ತಿಂಗಳು ಕಳೆದರೂ, ಕೆಲ ಗ್ರಾಪಂಗಳಲ್ಲಿ ತೆರಿಗೆ ವಸೂಲಾತಿ ಕುಂಠಿತಗೊಂಡಿದೆ. ಶೇ. 30, 40 ರಷ್ಟು ತೆರಿಗೆ ವಸೂಲಾತಿಗೆ ಕ್ರಮಕೈಗೊಳ್ಳಬೇಕು. ಇದರಿಂದ ಗ್ರಾಪಂ ಮಟ್ಟದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ, ವಿದ್ಯುತ್ ಬಲ್ಬ್ ನಿರ್ವಹಣೆ, ಇನ್ನಿತರ ಸಣ್ಣ ಪುಟ್ಟ ಖರ್ಚು ವೆಚ್ಚಗಳಿಗೆ ಅನುಕೂಲವಾಗಲಿದೆ. ಜೆಸ್ಕಾಂನಲ್ಲಿ ಬಾಕಿ ಇರುವ ವಿದ್ಯುತ್ ಬಿಲ್ನ್ನು ಗ್ರಾಪಂಯಿಂದ ಕಡ್ಡಾಯವಾಗಿ ಪಾವತಿಸಬೇಕು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದರು.