ಮಾನ್ವಿಯಲ್ಲಿ ಸಾಹಿತಿ ಸುಪ್ರಿತಾ ಅವರ ‘ಸವಿಭಾವ ಬಂಧ’ ಮತ್ತು ಗುಂಡಪ್ಪ ರಾಠೋಡ್ ಅವರ ‘ಕಲ್ಲು ಖಾರದ ಗಲಾಟೆ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ವಿಜಯವಾಣಿ ಹಿರಿಯ ಉಪ ಸಂಪಾದಕ ಅಶೋಕ ನೀಮಕರ್, ವೈದ್ಯೆ ಪ್ರಜ್ಞಾ ಹರಿಪ್ರಸಾದ್, ಕಸಾಪ ತಾಲೂಕು ಮಾಜಿ ಮೂಕಪ್ಪ ಕಟ್ಟಿನಮನಿ, ಪತ್ರಕರ್ತ ಬಸವರಾಜ ಭೋಗಾವತಿ ಇತರರಿದ್ದರು. 
ರಾಯಚೂರು

ಯುವಜನತೆ ಸಾಹಿತ್ಯ ಓದಿನತ್ತ ಒಲವು ಹರಿಸಲಿ

ಮಾನ್ವಿ: ಯುವಕರು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಿದಂತೆ ಪುಸ್ತಕ ಓದುವುದಕ್ಕೂ ಸಮಯ ಕೊಡಬೇಕು. ಪುಸ್ತಕ ಓದುವುದರಿಂದ ನಮ್ಮಲ್ಲಿ ಸಂಸ್ಕೃತಿ ಬೆಳೆಯುತ್ತದೆ ಎಂದು ಕಸಾಪ ಮಾಜಿ ತಾಲೂಕು ಅಧ್ಯಕ್ಷ ಮೂಕಪ್ಪ ಕಟ್ಟಿಮನಿ ಹೇಳಿದರು.
ಪಟ್ಟಣದ ಗ್ಯಾಲಕ್ಸಿ ಫಂಕ್ಷನ್ ಹಾಲ್‌ನಲ್ಲಿ ಯುವಜನ ಬಳಗದಿಂದ ಹಮ್ಮಿಕೊಂಡಿದ್ದ ಸಾಹಿತಿ ಸುಪ್ರಿತಾ ಅವರ ‘ಸವಿಭಾವ ಬಂಧ’ ಮತ್ತು ಗುಂಡಪ್ಪ ರಾಠೋಡ್ ಅವರ ‘ಕಲ್ಲು ಖಾರದ ಗಲಾಟೆ’ ಕೃತಿಗಳ ಬಿಡುಗಡೆ ಮತ್ತು ಯುವ ಸಾಹಿತ್ಯ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಕರಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿದೆ. ದಿನದ ಅತಿ ಹೆಚ್ಚು ಸಮಯ ಮೊಬೈಲ್ ಬಳಸುವುದರಂದ ಆರೋಗ್ಯ ಹಾಳಾಗುತ್ತದೆ. ಆದ್ದರಿಂದ ಸಾಹಿತ್ಯದ ಕಡೆ ಒಲವು ಹರಿಸಬೇಕು. ಪುಸ್ತಕಗಳನ್ನು ಓದುವುದರಿಂದ ಜ್ಞಾನ ವಿಕಾಸವಾಗುತ್ತದೆ. ಒತ್ತಡಗಳಿಂದ ಮನಸ್ಸು ಹಗುರವಾಗುತ್ತದೆ ಎಂದ ಅವರು, ಪ್ರಸ್ತುತ ಯುವಕರಲ್ಲಿ ಸಂಸ್ಕೃತಿ ದೂರವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪುಸ್ತಕ ಬಿಡುಗಡೆಗೊಳಿಸಿದ ವಿಜಯವಾಣಿ ಹಿರಿಯ ಉಪ ಸಂಪಾದಕ ಅಶೋಕ ನೀಮಕರ್ ಮಾತನಾಡಿ, ಸಾಹಿತ್ಯ ಜ್ಞಾನ ಪ್ರತಿಯೊಬ್ಬರಲ್ಲಿ ಇರುತ್ತದೆ. ಅದನ್ನು ನಾವು ಉಪಯೋಗಿಸಿಕೊಳ್ಳಬೇಕು. ಸಾಹಿತ್ಯ ಓದಿದಷ್ಟು ನಮ್ಮ ಬುದ್ಧಿಮಟ್ಟ ಹೆಚ್ಚುತ್ತದೆ. ಸಾಹಿತ್ಯವಿಲ್ಲದೆ ಜೀವನವಿಲ್ಲ. ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಬೇಕು ಎಂದು ತಿಳಿಸಿದರು.
ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಕೆ.ಖಾದರ್‌ಪಾಷಾ ಉಪನ್ಯಾಸ ನೀಡಿದರು. ಹಿರಿಯ ಪತ್ರಕರ್ತ ಬಸವರಾಜ ಭೋಗಾವತಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುರೇಶ ಕುರ್ಡಿ, ಜಿಲ್ಲಾ ಕಸಾಪ ಕಾರ್ಯದರ್ಶಿ ತಾಯಪ್ಪ ಹೊಸೂರು, ಪತ್ರಕರ್ತ ಪಿ.ಪರಮೇಶ ಮಾತನಾಡಿದರು. ಸರ್ಕಾರಿ ಪದವಿ ಕಾಲೇಜ್ ಪ್ರಾಧ್ಯಾಪಕ ಡಾ. ಸೈಯದ್ ಮಿನಾಜ್ ಉಲ್ ಹಸನ್ ಅಧ್ಯಕ್ಷತೆ ವಹಿಸಿದ್ದರು. ನಂತರ ಯುವ ಕವಿಗಳಿಂದ ಕವಿಗೋಷ್ಠಿ ನಡೆಯಿತು. ಕಸಾಪ ತಾಲೂಕು ಅಧ್ಯಕ್ಷ ಶರಣಬಸವ ನೀರಮಾನ್ವಿ, ವೈದ್ಯೆ ಪ್ರಜ್ಞಾ ಹರಿಪ್ರಸಾದ್, ಪಿಎಲ್‌ಡಿಬಿ ಮಾಜಿ ಅಧ್ಯಕ್ಷ ಶಿವಶಂಕರಗೌಡ ಬಾಗಲವಾಡ, ಸಾಹಿತಿಗಳಾದ ಸುಪ್ರಿತಾ ಕೆ.ಆರ್., ಗುಂಡಪ್ಪ ರಾಠೋಡ್, ಉಪನ್ಯಾಸಕ ಡಾ.ಬಸವರಾಜ ಸುಂಕೇಶ್ವರ, ಯುವಜನ ಬಳಗ ಸಂಚಾಲಕರಾದ ಡಾ.ಸೈಯದ್ ಮುಜೀಬ್ ಆಹ್ಮದ್, ರವಿಶರ್ಮ ಜಾನೇಕಲ್ ಇತರರಿದ್ದರು.