ಯಾವುದೇ ಮಂದಿರದಲ್ಲಿ ಅಧಿಕಾರಿಗಳು ಪಾರದರ್ಶಕವಾಗಿ ಆಡಳಿತ ನಡೆಸಬೇಕು. ರಾಮಮಂದಿರದಲ್ಲಿ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಸನಾತನ ಧರ್ಮಕ್ಕೆ ಸಾಟಿಯಾದ ಧರ್ಮ ಪ್ರಪಂಚದಲ್ಲಿಲ್ಲ. ನಮ್ಮದು ಸರ್ವಧರ್ಮ ಶಾಂತಿಯ ದೇಶವಾಗಿದ್ದು, ಮತ್ತೊಂದು ಧರ್ಮವನ್ನು ಅವಹೇಳನ ಮಾಡದೆ ಒಗ್ಗೂಡಿ ಜೀವನ ನಡೆಸಬೇಕು. ಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠದ ಪೀಠಾಧಿಪತಿಗಳು
- 29ರಂದು ಪೂರ್ವಾರಾಧನೆ
- 30ರಂದು ಮಧ್ಯಾರಾಧನೆ
- 31ರಂದು ಉತ್ತರಾರಾಧನೆ
ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಆ.27ರಿಂದ ಸೆ.2ರವರೆಗೆ (ಏಳು ದಿನ) ಸಪ್ತರಾತ್ರೋತ್ಸವ ಆಯೋಜಿಸಲಾಗಿದ್ದು, ಶ್ರೀಮಠದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಪೀಠಾಧಿಪತಿ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.
ಶ್ರೀಮಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಆ.27ರಂದು ಧ್ವಜಾರೋಹಣ, ಗೋಪೂಜೆ, ಅಶ್ವಪೂಜೆ ಹಾಗೂ ಧಾನ್ಯೋತ್ಸವದೊಂದಿಗೆ ಆರಾಧನೆಗೆ ಚಾಲನೆ ಸಿಗಲಿದೆ. ಆ.28ರಂದು ಶ್ರೀಮಠದ ಪುಷ್ಕರಣಿಯಲ್ಲಿ ತೆಪ್ಪೋತ್ಸವ, ಉತ್ಸವ ಮೆರವಣಿಗೆ, ದೀಪೋತ್ಸವ ಮತ್ತು ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಆ.29ರಂದು ಪೂರ್ವಾರಾಧನೆ ನಿಮಿತ್ತ ತಿರುಮಲ ತಿರುಪತಿ ದೇವಸ್ಥಾನದ ಶೇಷವಸ್ತ್ರ ಪ್ರಸಾದ, ತಮಿಳುನಾಡಿನ ಶ್ರೀರಂಗನಾಥಸ್ವಾಮಿ ದೇಗುಲದ ವಸ್ತ್ರ ಹಾಗೂ ಕಂಚಿಯ ವರದರಾಜ ದೇವಸ್ಥಾನದ ದೇವರ ವಸ್ತ್ರವನ್ನು ರಾಯರಿಗೆ ಸಮರ್ಪಿಸಿ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಗುತ್ತದೆ.
ಆ.30ರಂದು ಮಧ್ಯಾರಾಧನೆ ನಿಮಿತ್ತ ರಾಯರಿಗೆ ವಿಶೇಷ ಪಂಚಾಮೃತ ಅಭಿಷೇಕ, ಮಠದ ಪ್ರಾಂಗಣದಲ್ಲಿ ಸುವರ್ಣ ರಥೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಹಾಮಂಗಳಾರತಿ ನೆರವೇರಲಿದೆ. ಆ.31 ರಂದು ಉತ್ತರಾರಾಧನೆಯ ದಿನ ರಾಯರ ಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ, ಮಹಾರಥೋತ್ಸವ ಮತ್ತು ಭಕ್ತರಿಂದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನಡೆಯಲಿದೆ. ಸೆ.1ರಂದು ಸುಜ್ಞಾನೇಂದ್ರ ತೀರ್ಥರ ಆರಾಧನಾ ಕಾರ್ಯಕ್ರಮ ಹಾಗೂ ಸೆ.2ರಂದು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಪ್ತರಾತ್ರೋತ್ಸವವು ಸಮಾರೋಪಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ರಾಘವೇಂದ್ರ ಅನುಗ್ರಹ ಪ್ರಶಸ್ತಿ
ಆ.29ರ ಸಂಜೆ ಯೋಗೀಂದ್ರ ಸಭಾ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಮಠದ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ನಗರಹಳ್ಳಿ ವಾದಿರಾಜಾಚಾರ್ಯ ಮತ್ತು ತಂಜಾವೂರಿನ ಶಾಸ್ತ್ರ ವಿಶ್ವವಿದ್ಯಾಲಯದ ಉಪ ಕುಲಪತಿ ಸುಬ್ರಮಣಿಯನ್ ಅವರಿಗೆ ‘ರಾಘವೇಂದ್ರ ಅನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ. ಇದೇ ವೇಳೆ ಶ್ರೀಮಠದಿಂದ ಪ್ರಕಟಿತ ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಯ ಗ್ರಂಥಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ
ಈ ಬಾರಿಯ ಆರಾಧನೆ ನಿಮಿತ್ತ ದಾನಿಗಳ ನೆರವಿನಿಂದ ನಿರ್ಮಿಸಲಾದ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ ಸುಬುಧೇಂದ್ರ ತೀರ್ಥರು, ರಾಯರ ಬೃಂದಾವನವಿರುವ ಶಿಲಾ ಮಂಟಪದ ಸ್ತಂಭಗಳಿಗೆ ಸುವರ್ಣ ಲೇಪಿತ ಕವಚ ಮಾಡಲಾಗಿದೆ. 12 ಅಂತಸ್ತಿನ 500 ರೂ. ಬಾಡಿಗೆ ದರದ ಕೊಠಡಿಗಳು ಹಾಗೂ ದಾನಿಗಳಿಂದ ನಿರ್ಮಾಣಗೊಂಡ 400 ಕೊಠಡಿಗಳ ಸುಯತೀಂದ್ರ ತೀರ್ಥರ ವಸತಿ ಗೃಹ ಲೋಕಾರ್ಪಣೆ ಆಗಲಿವೆ. ನದಿ ತೀರದ ಆಧ್ಯಾತ್ಮಿಕ ಥೀಮ್ ಪಾರ್ಕ್, ಕಲಾತ್ಮಕ ಕಾರಿಡಾರ್, ಒಳಚರಂಡಿ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಉದ್ಘಾಟಿಸಲಾಗುವುದು ಎಂದು ಹೇಳಿದರು.
ಉಚಿತ ಸಾರಿಗೆ-ಭಕ್ತರಿಗೆ ಸೌಲಭ್ಯಗಳು
ತಿರುಪತಿ ಮಾದರಿಯಲ್ಲಿ ಕ್ಷೇತ್ರ ಸಂಚಾರಕ್ಕಾಗಿ ಆರು ಉಚಿತ ಸಾರಿಗೆ ಬಸ್‌ಗಳು, ಕುಡಿಯುವ ನೀರು, ಆಂಬ್ಯುಲೆನ್ಸ್ ಹಾಗೂ ಭಕ್ತರಿಗೆ ಬ್ಯಾಟರಿ ಚಾಲಿತ ವಾಹನಗಳ ಸೌಲಭ್ಯ ಕಲ್ಪಿಸಲಾಗಿದೆ. ಆರಾಧನೆಗೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನದಿ ತೀರದಲ್ಲಿ ಪುಣ್ಯಸ್ನಾನಕ್ಕಾಗಿ ಶವರ್ ಅಳವಡಿಕೆ, ನೂರಾರು ಶೌಚಗೃಹಗಳ ವ್ಯವಸ್ಥೆ ಹಾಗೂ ಸಂಚಾರ ದಟ್ಟಣೆ ನಿವಾರಣೆಗೆ ಪ್ರತ್ಯೇಕ ಆಟೋ ಸ್ಟ್ಯಾಂಡ್ ಮಾಡಲಾಗಿದೆ ಎಂದು ಶ್ರೀಗಳು ತಿಳಿಸಿದರು.
ವಿಶ್ವವಿದ್ಯಾಲಯ ಸ್ಥಾಪನೆ-ಕ್ಷೇತ್ರಾಭಿವೃದ್ಧಿ ಯೋಜನೆ
ಕ್ಷೇತ್ರದಲ್ಲಿ ಜನಸಂದಣಿ ತಡೆಯಲು ರಿಂಗ್ ರೋಡ್ ನಿರ್ಮಾಣ ಹಾಗೂ ವಿಶ್ವವಿದ್ಯಾಲಯ ಸ್ಥಾಪನೆಗೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ ವಿದ್ವಾಂಸರ ತಂಡದಿಂದ ಅಧ್ಯಯನ ಪ್ರಾರಂಭಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಎರಡು ರಾಜ್ಯದ ರೈತರ ಅನುಕೂಲಕ್ಕಾಗಿ ಚಿಕ್ಕ ಮಂಚಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದ ನಂತರ ತೀರ್ಮಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದ ಪೀಠಾಧಿಪತಿಗಳು, ಎಲೆ ಬಿಚ್ಚಲಿಯಲ್ಲಿರುವ ಮಠಕ್ಕೆ ಸೇರಿದ 3.5 ಎಕರೆ ಭೂಮಿಗೆ ಈಗಾಗಲೇ ಕಾಂಪೌಂಡ್ ನಿರ್ಮಿಸಲಾಗಿದ್ದು, ಅದನ್ನು ಪ್ರತಿ ಮಂತ್ರಾಲಯವೆಂದು ಅಭಿವೃದ್ಧಿಪಡಿಸಲಾಗುವುದು ಎಂದರು.