ರಾಯಚೂರಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಇಚೇಗೆ ಮಹಾನಗರ ಪಾಲಿಕೆಯಿಂದ ವಿಶ್ವ ಮಲೇರಿಯಾ ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಡಿಪಿಡಿಓ ಡಾ ಚಂದ್ರಶೇಖರಯ್ಯ ಸ್ವಾಮಿ ಮಾತನಾಡಿದರು. ಪಾಲಿಕೆ ಆರೋಗ್ಯಾಧಿಕಾರಿ ಡಾ ಮಹ್ಮದ್‌ಶಾಕೀರ , ಪಾಲಿಕೆಯ ಪರಿಸರ ಅಭಿಯಂತರರು ಜಯಪಾಲ ರೆಡ್ಡಿ, ಬಿಹೆಚ್‌ಇಓ ಸರೋಜಾ ಕೆ, ಎಂಟಿಎಸ್ ಸಂಧ್ಯಾ ಇದ್ದರು. 
ರಾಯಚೂರು

ವಿಶ್ವ ಮಲೇರಿಯಾ ದಿನ: ತರಬೇತಿ ಕಾರ್ಯಾಗಾರ ಸಾರ್ವಜನಿಕರು ಮಲೇರಿಯಾ ತಡೆಗೆ ಸಹಕರಿಸಿ: ಜಿಲ್ಲಾ ಡಿಪಿಡಿಓ

ರಾಯಚೂರು
ಮಲೇರಿಯಾ ಜ್ವರವು ಪ್ಲಾಸ್ಮೋಡಿಯಂ ಎಂಬ ಪರಾವಲಂಭಿ ಸೂಕ್ಷ್ಮಾಣುವಿನಿಂದ ಉಂಟಾಗಬಹುದಾಗಿದ್ದು, ಹೆಣ್ಣು ಅನಾಫಿಲೀಸ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆಂದು ಜಿಲ್ಲಾ ಡಿಪಿಡಿಓ ಡಾ ಚಂದ್ರಶೇಖರಯ್ಯ ಸ್ವಾಮಿ ಹೇಳಿದರು.

ನಗರದ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ರಾಯಚೂರು ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಲೇರಿಯಾ ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಳಿ, ನಡುಕ, ಬಿಟ್ಟು ಬಿಟ್ಟು ಜ್ವರ ಬರುವುದು, ವಾಕರಿಕೆ, ಮೈ ಬೆವರುವುದು ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡು ಬಂದಲ್ಲಿ ಮಲೇರಿಯಾ ಜ್ವರ ಇರಬಹುದು ಎಂದು ಭಾವಿಸಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಲೆಪನ ಪರೀಕ್ಷೆಗೆ ಒಳಪಟ್ಟು ಖಚಿತಪಟ್ಟಲ್ಲಿ ಸೂಕ್ತ ಉಚಿತ ಚಿಕಿತ್ಸೆ ಪಡೆದು ಗುಣ ಹೊಂದಬಹುದಾಗಿದೆ ಎಂದರು.




ಮಲೇರಿಯಾ ಪ್ರಕರಣಗಳ ತಡೆಗೆ ಮನೆಯ ಒಳಭಾಗ ಆರೋಗ್ಯ ಇಲಾಖೆಯಿಂದ ಕೈಗೊಳ್ಳುವ ಕೀಟನಾಶಕ ಸಿಂಪರಣೆಗೆ ಸಾರ್ವಜನಿಕರು ಸಹಕರಿಸಬೇಕು. ಸ್ವಯಂ ರಕ್ಷಣಾ ಕ್ರಮಗಳಾದ ಮಲಗುವಾಗ ಸೊಳ್ಳೆ ಪರದೆ ಬಳಕೆ ಮಾಡಬೇಕು. ಕಿಟಕಿಗಳಿಗೆ ಸೊಳ್ಳೆಗಳು ನುಸುಳದಂತೆ ಜಾಲರಿ ಅಳವಡಿಸುವುದು. ಆರೋಗ್ಯ ಇಲಾಖೆಯಿಂದ ನೀಡಲ್ಪಡುವ ಲಾರ್ವಹಾರಿ ಗಪ್ಪಿ ಮತ್ತು ಗಂಬೂಷಿಯಾ ಮೀನುಗಳನ್ನು ಶಾಶ್ವತವಾಗಿ ನೀರು ನಿಲ್ಲುವ ಸ್ಥಳಗಳಲ್ಲಿ ಬಿಡಲು ಉಚಿತವಾಗಿ ಪಡೆಯಬಹುದಾಗಿದೆ ಎಂದರು.



ಪಾಲಿಕೆ ಆರೋಗ್ಯಾಧಿಕಾರಿ ಡಾ ಮಹ್ಮದ್‌ಶಾಕೀರ ಮಾತನಾಡಿ, ಸಾರ್ವಜನಿಕರು ಯಾವುದೇ ಜ್ವರವಿರಲಿ, ಮೊದಲು ರಕ್ತಲೇಪನ ಪರೀಕ್ಷೆ ಮಾಡಿಸಬೇಕು. ಇದರಿಂದ ಮಲೇರಿಯಾ ಸೇರಿದಂತೆ ಸೋಂಕಿತ ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸಾಧ್ಯವಾಗುವುದು. ನಗರದ ಎಲ್ಲ ಪ್ರದೇಶಗಳಲ್ಲಿ ಮನೆಯ ಸುತ್ತಲಿನ ಜಾಗಗಳಲ್ಲಿ ಶಾಶ್ವತ ನೀರು ನಿಲ್ಲುವ ಸ್ಥಳಗಳಿದ್ದರೆ. ನೀರು ನಿಲ್ಲದಂತೆ ನಿಗಾ ವಹಿಸಲು ಜನತೆಗೆ ಜಾಗೃತಿ ನೀಡಲು ತಿಳಿಸಿದರು. ಮುಖ್ಯವಾಗಿ ಮಲೇರಿಯಾ ಹರಡುವ ಅನಾಪೀಲಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರ್ತಿಸುವುದು, ಕೀಟ ನಾಶಕ ಸಿಂಪರಣೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಪಾಲಿಕೆಯ ಪರಿಸರ ಅಭಿಯಂತರರು ಜಯಪಾಲ ರೆಡ್ಡಿ, ಬಿಹೆಚ್‌ಇಓ ಸರೋಜಾ ಕೆ, ಎಂಟಿಎಸ್ ಸಂಧ್ಯಾ ಸೇರಿದಂತೆ ಅನೇಕರು ಇದ್ದರು.