ಪ್ರಮುಖ ಮುಖ್ಯಾಂಶಗಳು
ರಾಯಚೂರು ಸಮಾಜದಲ್ಲಿ ಬೇರು ಬಿಟ್ಟಿರುವ ಹಲವು ಸಾಮಾಜಿಕ ಪಿಡುಗುಗಳಿಗೆ ಶಿಕ್ಷಣವೇ ಅಸ್ತ್ರವಾಗಿದ್ದು. ಬಾಲಕಾರ್ಮಿಕ ಪದ್ಧತಿ ನಿವಾರಣೆಯಾಗಬೇಕಾದರೆ ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿದ್ದರಾಮಪ್ಪ ಕಲ್ಯಾಣರಾವ್ ಹೇಳಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಪೋಲಿಸ್ ಇಲಾಖೆ, ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇರಿ ಅನೇಕ ಇಲಾಖೆಗಳ ಸಹಕಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ-2026ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕುರಿತು ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಣೆ ಮಾಡಬೇಕು.
ವಿವಿಧ ಕಾರಣಗಳಿಗೆ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಕ್ಕಳನ್ನು ಗುರುತಿಸಿ ಶಿಕ್ಷಣ ನೀಡಿದಾಗ ಮಾತ್ರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯಾಗುತ್ತದೆ ಎಂದರು.
ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಅವರ ಶಿಕ್ಷಣ ಹಕ್ಕಿನಿಂದ ವಂಚಿಸಿ, ದುಡಿಮೆಗೆ ಬಳಸುವುದು ಕಾನೂನು ಪ್ರಕಾರ ಅಪರಾಧ. ಇದಕ್ಕಾಗಿ, ಮಕ್ಕಳಿಂದ ದುಡಿಸಿಕೊಳ್ಳುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನಿನಡಿ ಶಿಕ್ಷೆ ವಿಧಿಸಲು ಅವಕಾಶವಿದೆ. ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ನಿಗಾ ಇಡಬೇಕು ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶರಣಮ್ಮ ಮಾತನಾಡಿ, ಬಾಲಕಾರ್ಮಿಕ ಪದ್ದತಿಯನ್ನ ಬೇರು ಸಮೇತ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಈ ಪ್ರಯತ್ನಕ್ಕೆ ಸಂಘಸಂಸ್ಥೆ, ಸಂಘಟನೆಗಳು ಹಾಗೂ ಸಮುದಾಯಗಳು ಸಹ ಕೈ ಜೋಡಿಸಿದರೆ ಈ ಪದ್ಧತಿಗೆ ಸಂಪೂರ್ಣ ಕಡಿವಾಣ ಬೀಳಲಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ ಮಾತನಾಡಿ, ಬಾಲ ಕಾರ್ಮಿಕರನ್ನು ಪತ್ತೆಗೆ ಸಾರ್ವಜನಿಕರು ಸಹ ನೆರವಾಗಬೇಕು. ತಮ್ಮ ಸುತ್ತಮುತ್ತಲಿನ ಅಂಗಡಿ, ಹೋಟೆಲ್, ಕಾರ್ಖಾನೆ, ತೋಟ ಸೇರಿದಂತೆ ಎಲ್ಲಿಯಾದರೂ ಬಾಲ ಕಾರ್ಮಿಕರು ಕಂಡುಬಂದಲ್ಲಿ ಕಾರ್ಮಿಕ ಇಲಾಖೆಯ 1098 ಸಹಾಯವಾಣಿಗೆ ಮಾಹಿತಿ ನೀಡಬೇಕು. ಆಗ ಅಧಿಕಾರಿಗಳು ಬಂದು ಮಕ್ಕಳನ್ನು ರಕ್ಷಿಸುತ್ತಾರೆ ಎಂದರು.
ನಂತರ ಶಾಲ ಮಕ್ಕಳಿಗೆ ಹಾಗೂ ಪಾಲಕರಿಗೆ ಪ್ರಮಾಣ ವಚನ ಭೋದಿಸಿಸಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಶರಣಪ್ಪ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಸುದರ್ಶನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ವೃತ್ತ ಕಾರ್ಮಿಕ ನಿರೀಕ್ಷಕಿ ಪ್ರಿಯಾಂಕ ಸೇರಿದಂತೆ ಕಾರ್ಮಿಕ ಇಲಾಖೆಯ ವಿವಿಧ ಅಧಿಕಾರಿಗಳು, ವಿವಿಧ ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.
(ಬಾಕ್ಸ್)
ಕಾರ್ಯಕ್ರಮದ ಮೊದಲು ನಗರದ ತಹಶಿಲ್ದಾರ್ ಕಾರ್ಯಾಲಯದಿಂದ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದವರೆಗೆ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ-2026ರ ಕಾರ್ಯಕ್ರಮದ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಜಾಥಾದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ.,ತಹಶೀಲ್ದಾರ್ ಸುರೇಶ ವರ್ಮಾ, ಡಿಡಿಪಿಐ ಮಲ್ಲಿಕಾರ್ಜುನ ಸೇರಿದಂತೆ ಇತರರು ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು.