ಲಿಂಗಸುಗೂರು ಬಸ್ ಡಿಪೋದಲ್ಲಿ ರಸ್ತೆ ಸುರಕ್ಷತೆ ಮಾಸ, ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಮಂಜುಳಾ ಉಂಡಿ ಶಿವಪ್ಪ ಮಾತನಾಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ., ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್, ಡಿಪೋ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿ, ನಾಗರಾಜ ಗಸ್ತಿ ವಕೀಲ ಇದ್ದರು. 
ರಾಯಚೂರು

ಒತ್ತಡಕ್ಕೆ ಒಳಗಾಗದೆ ಕೆಲಸ ನಿರ್ವಹಿಸಿ

ಶಾಮಸುಂದರ್ ಕೊಪ್ಪಳಕರ್
ಲಿಂಗಸುಗೂರು: ದೊಡ್ಡ ವಾಹನಗಳ ಚಾಲನೆ ಮಾಡುವುದು ಸಾಮಾನ್ಯವಲ್ಲ. ಸಾರಿಗೆ ಸಂಸ್ಥೆ ಚಾಲಕರ ವೇತನವನ್ನು ಸರ್ಕಾರ ಹೆಚ್ಚಳ ಮಾಡಬೇಕೆಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಮಂಜುಳಾ ಉಂಡಿ ಶಿವಪ್ಪ ಹೇಳಿದರು.
ಪಟ್ಟಣದ ಬಸ್ ಡಿಪೋದಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸ, ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಾಲಕರು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು. ದೇವರನ್ನು ನೆನೆಸಿಕೊಂಡು ಕೆಲಸ ಮಾಡಬೇಕು. ಸಾರಿಗೆ ಸಂಸ್ಥೆಯವರು ಚಾಲಕರ ತಪ್ಪು ಹುಡುಕುವ ಕೆಲಸ ಮಾಡಬಾರದು. ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿದೆ. ಅನೇಕ ಸಾರಿಗೆ ಬಸ್‌ಗಳಿಗೆ ಇಂಡಿಕೇಟರ್, ಸೈಡ್ ಗ್ಲಾಸ್‌ಗಳು ಇರುವುದಿಲ್ಲ. ರಾತ್ರಿ ಸಮಯದಲ್ಲಿ ಬಸ್ ಇದೆ ಎಂಬುದೇ ಗೊತ್ತಾಗುವುದಿಲ್ಲ. ಟ್ರಾಫಿಕ್ ನಿಯಮದ ಪ್ರಕಾರ ಸರ್ಕಾರ ಬಸ್‌ಗಳಿಗೆ ಸೌಲಭ್ಯ ಕಲ್ಪಿಸಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ.ಕೆ ಮಾತನಾಡಿ, ರಾಯಚೂರು ಜಿಲ್ಲೆಗೆ ಹೋಲಿಸಿದರೆ ಲಿಂಗಸುಗೂರಲ್ಲಿ ಅಫಘಾತಗಳ ಸಂಖ್ಯೆ ಜಾಸ್ತಿಯಾಗಿದೆ. ಚಾಲಕರು ಮುಂಜಾಗ್ರತೆ ವಹಿಸುವುದು ಮುಖ್ಯ. ರಸ್ತೆ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು ಎಂದರು.