ಅರವಿಂದ ಬಡಿಗೇರ 
ರಾಯಚೂರು

ಕಾಷ್ಠ ಶಿಲ್ಪಿ ಅರವಿಂದಗೆ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ

ಹಟ್ಟಿಚಿನ್ನದಗಣಿ: ರಥಗಳ ನಿರ್ಮಾಣದಲ್ಲಿ ಛಾಪು ಮೂಡಿಸಿರುವ ಪಟ್ಟಣದ ಕಾಷ್ಠ ಶಿಲ್ಪಿ ಅರವಿಂದ ವಿ. ಬಡಿಗೇರ ಅವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2025ನೇ ಸಾಲಿನ ಗೌರವ ಪ್ರಶಸ್ತಿ ಘೋಷಿಸಿದ್ದು, ಕಲಾಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. 
ಬೆಂಗಳೂರು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2024 ಹಾಗೂ 2025ನೇ ಸಾಲಿನ ಗೌರವ ಪ್ರಶಸ್ತಿ, 2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ 19ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಬಹುಮಾನಗಳನ್ನು ಪ್ರಕಟಿಸಿದ್ದು, 2025ನೇ ಸಾಲಿನ ಗೌರವ ಪ್ರಶಸ್ತಿಗೆ ಹಟ್ಟಿ ಚಿನ್ನದ ಗಣಿಯ ಅರವಿಂದ ವಿ. ಬಡಿಗೇರ (ರಥ ಶಿಲ್ಪ) ಆಯ್ಕೆಯಾಗಿದ್ದಾರೆ. 
ಗೌರವ ಪ್ರಶಸ್ತಿಯು 50 ಸಾವಿರ ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದ್ದು, ಮಾರ್ಚ್ 11ರಂದು ನಡೆಯಲಿರುವ ಶಿಲ್ಪಕಲಾ ಪ್ರದರ್ಶನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪಟ್ಟಣದ ಕಲಾವಿದನಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿರುವುದು ಸ್ಥಳೀಯರು ಹಾಗೂ ಕಲಾಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದು, ಶ್ರಮಜೀವಿ ಶಿಲ್ಪಿಗಳಿಗೆ ಇಂತಹ ಗೌರವಗಳು ದೊರೆಯುವುದು ಕಲಾ ಪರಂಪರೆಯ ಉಳಿವಿಗೆ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
ರಥಗಳ ನಿರ್ಮಾಣದಲ್ಲಿ ಅರವಿಂದ ಪ್ರತಿಭೆ ಹಾಗೂ ವಿವಿಧ ಜಿಲ್ಲೆಗಳಿಂದಲೂ ಹೆಚ್ಚುತ್ತಿರುವ ಬೇಡಿಕೆ ಕುರಿತು ಕಳೆದ ಅಕ್ಟೋಬರ್ 7ರಂದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.