ದೇವದುರ್ಗದಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನ ಕಾರ್ಯಕ್ರಮವನ್ನು ತಾಪಂ ಇಒ ಬಸವರಾಜ ಹಟ್ಟಿ ಉದ್ಘಾಟಿಸಿದರು.
ದೇವದುರ್ಗ: ಅಂಗವಿಕಲರಿಗೆ ಸರ್ಕಾರ ವಿವಿಧ ಯೋಜನೆಗಳಡಿ ಮೀಸಲಿಟ್ಟ ಅನುದಾನ ಸದ್ಬಳಕೆ ಮಾಡಲು ಸರ್ಕಾರದ ಇಚ್ಛಾಶಕ್ತಿ ಹಾಗೂ ಅಧಿಕಾರಿಗಳ ಪ್ರಾಮಾಣಿಕೆ ಅಗತ್ಯವಾಗಿದೆ ಎಂದು ಮನೋ ಚೈತನ್ಯ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಬಸನಗೌಡ ದೇಸಾಯಿ ಹೇಳಿದರು.
ಪಟ್ಟಣದ ಖೇಣೇದ್ ಫಂಕ್ಷನ್ ಹಾಲ್‌ನಲ್ಲಿ ಪ್ರತಿಧ್ವನಿ ಅಂಗವಿಕಲರ ಅಭಿವೃದ್ಧಿ ಸಂಸ್ಥೆ, ಅಂಗವಿಕಲ ಪಾಲಕರ ಒಕ್ಕೂಟ ಹಾಗೂ ಮನೋ ಚೈತನ್ಯ ಫೌಂಡೇಷನ್‌ನಿಂದ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮಂಗಳವಾರ ಮಾತನಾಡಿದರು.
ಜೀವ ಸಂಕುಲದಲ್ಲಿ ಅಂಗವೈಕಲ್ಯ ಎನ್ನುವುದು ಪ್ರಕೃತಿ ನಿಯಮ. ಅವರನ್ನು ಎಲ್ಲರೂ ಸಮಾನವಾಗಿ ಕಾಣಬೇಕಿದೆ. ಅನುಕಂಪ ತೋರಿಸುವ ಬದಲು ಅವರಿಗೂ ಅವಕಾಶಗಳನ್ನು ನೀಡಬೇಕಿದೆ. ಅವರಲ್ಲೂ ಪ್ರತಿಭೆಯಿದ್ದು ಸಮಾಜ ಗುರುತಿಸುವ ಕೆಲಸ ಮಾಡಬೇಕು ಎಂದರು.
ಅಂಗವಿಕಲರ ಕಲ್ಯಾಣಕ್ಕಾಗಿ ವಿವಿಧ ಇಲಾಖೆ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಅನುದಾನ ಮೀಸಲಾತಿ ಇದೆ. ಆದರೆ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ, ಸಮಾಜದ ಅಸಹಕಾರ, ಸರ್ಕಾರದ ಅನುದಾನ ಸದ್ಬಳಕೆಯಲ್ಲಿ ತಾರತಮ್ಯ ನೀತಿಯಿಂದ ಅವರು ಸಮಸ್ಯೆ ಎದುರಿಸುತ್ತಿದ್ದಾರೆ. ಸಂವಿಧಾನದತ್ತವಾಗಿ ಅವರಿಗೆ ದೊರೆತ ಸೌಲಭ್ಯಗಳನ್ನು ಕಲ್ಪಿಸಿದರೆ ಇನ್ಯಾವ ಅನುಕಂಪವೂ ಬೇಕಿಲ್ಲ ಎಂದರು.
ತಾಪಂ ಇಒ ಬಸವರಾಜ ಹಟ್ಟಿ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಸಿಡಿಪಿಒ ಅನಿಲ್‌ಕುಮಾರ ಕಾಂಬ್ಳೆ, ಪಿಐ ಎಸ್.ಮಂಜುನಾಥ, ಪ್ರಮುಖರಾದ ಎಸ್.ಎಸ್.ಘಂಟಿ, ಜಿ.ಹಂಪಣ್ಣ ಬೆಟ್ಟನಗೌಡ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ವೆಂಕೋಬ ದೊಂಡಂಬಳಿ, ಹನುಮಂತ್ರಾಯ ಚಿಂತಲಕುಂಟಿ, ಗೌರಿ ಜಿ.ನಾಯಕ, ಶ್ರೀದೇವಿನಾಯಕ, ಲಕ್ಷ್ಮೀ ರಾಠೋಡ್, ಬಾಪುಗೌಡ ಇತರರಿದ್ದರು.