ಉದ್ಘಾಟನೆಗೆ ಕಾದಿರುವ ಗುರುಗುಂಟಾ ಶ್ರೀ ಅಮರೇಶ್ವರ ಬಸ್ ನಿಲ್ದಾಣ.
- ಗುರುಗುಂಟಾ ದೇವಸ್ಥಾನದಲ್ಲಿ ಭಕ್ತರಿಗೆ ಸೌಲಭ್ಯಗಳ ಕೊರತೆ
ಲಿಂಗಸುಗೂರು: ಇತಿಹಾಸ ಪ್ರಸಿದ್ಧ ಗುರುಗುಂಟಾ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಮೂಲಸೌಕರ್ಯ ಕೊರತೆ ತಲೆದೋರಿದ್ದು, ಭಕ್ತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ದೇವಸ್ಥಾನ ಮುಜುರಾಯಿ ಇಲಾಖೆಗೆ ಒಳಪಟ್ಟಿದ್ದು, ಪ್ರವಾಸೋದ್ಯಮ ಪಟ್ಟಿಗೂ ಸೇರಿಸಲಾಗಿದೆ. ಭಕ್ತರಿಂದ ಪ್ರತಿ ವರ್ಷ ಒಂದು ಕೋಟಿ ರೂ. ಆದಾಯ ಬರುತ್ತಿದ್ದರೂ ಹಲವು ಸಮಸ್ಯೆಗಳು ಕಾಡುತ್ತಿವೆ. ಇಲ್ಲಿ ಸುಸಜ್ಜಿತ ಮೂರು ಹೈಟೆಕ್ ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಕಲ್ಯಾಣ ಮಂಟಪ ಬಳಿಯ ಶೌಚಗೃಹ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ವಾಸವಿ ಛತ್ರದ ಹತ್ತಿರದು ಗಬ್ಬು ನಾರುತ್ತಿದೆ. ಹೊಸ ಹೊಂಡದ ಹತ್ತಿರ 2023-24ನೇ ವರ್ಷ 25 ಲಕ್ಷ ರೂ. ವೆಚ್ಚದಲ್ಲಿ ಕೆಆರ್‌ಐಡಿಎಲ್ ಸಂಸ್ಥೆ ಹೊಸ ಮಾದರಿಯ ಸಮುದಾಯ ಶೌಚಗೃಹ ನಿರ್ಮಿಸಿದ್ದು, ಇನ್ನೂ ಹಸ್ತಾಂತರವಾಗಿಲ್ಲ. ಇದರಿಂದ ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲರೂ ಅನಿವಾರ್ಯವಾಗಿ ಬಯಲಿಗೇ ಹೋಗಬೇಕಾದ ಸ್ಥಿತಿ ಬಂದೊದಗಿದೆ.
ಶುದ್ಧ ನೀರಿಲ್ಲ: ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಮರ್ಪಕ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಿಲ್ಲ. ಇದ್ದ ಒಂದು ಘಟಕ ಕೆಟ್ಟು ವರ್ಷ ಕಳೆಯುತ್ತಿದ್ದರೂ ರಿಪೇರಿ ಮಾಡಿಲ್ಲ. ಉಪಕರಣಗಳೂ ತುಕ್ಕು ಹಿಡಿಯುತ್ತಿವೆ. ಈರಣ್ಣ ಗುಡಿ ಹತ್ತಿರದ ನೀರಿನ ಘಟಕ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಭಕ್ತರು ಹೋಟಲ್‌ಗಳಲ್ಲಿ ಬಾಟಲಿ ನೀರು ಖರೀದಿಸುವಂತಾಗಿದೆ.
ದುರಸ್ತಿ ಕಾಣದ ಕೊಠಡಿಗಳು
ಗುರುಗುಂಟಾ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ದಾನಿಗಳು ನೀಡಿದ ಹಣದಲ್ಲಿ ಹಲವು ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ, ಬಹುತೇಕ ಕೊಠಡಿಗಳು ಬೀಳುವ ಸ್ಥಿತಿಗೆ ತಲುಪಿವೆ. ಜೀರ್ಣೋದ್ಧಾರ ಮಾಡಿ ಸುಣ್ಣ ಬಣ್ಣ ಬಳಿಯಲೂ ಅಧಿಕಾರಿಗಳು ಮುಂದಾಗುತ್ತಿಲ್ಲ. ದೂರದ ಊರುಗಳಿಂದ ಭಕ್ತರು ಕೊಠಡಿಗಳಲ್ಲಿ ಅನಿವಾರ್ಯವಾಗಿ ಇದ್ದು ಹೋಗುತ್ತಿದ್ದಾರೆ.
ಉದ್ಘಾಟನೆ ಕಾಣದ ಬಸ್ ನಿಲ್ದಾಣ
ಈ ಹಿಂದೆ 2022-23ನೇ ಸಾಲಿನ ಕೆಕೆಆರ್‌ಡಿಬಿ ಎಸ್ಸಿಪಿ ಅನುದಾನದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಕ್ಯಾಶುಟೆಕ್ ಅಧಿಕಾರಿಗಳು ದೇವರಭೂಪೂರು ಗ್ರಾಪಂಗೆ ಹಸ್ತಾಂತರ ಮಾಡಿದ್ದಾರೆ. ದೇವಸ್ಥಾನದ ಅಧಿಕಾರಿಗಳು ಈ ಬಗ್ಗೆ ತಲೆ ಕಡಿಸಿಕೊಳ್ಳದ ಕಾರಣ ಉದ್ಘಾಟನೆಯಾಗದೇ ನಿಂತಿದೆ. ವಿದ್ಯುತ್ ಉಪಕರಣಗಳು ಸಹ ಹಾಳಾಗಿವೆ. ಭಕ್ತರು ಬಿಸಿಲಿನಲ್ಲೇ ಬಸ್‌ಗಾಗಿ ಕಾಯುವ ಪರಿಸ್ಥಿತಿ ಬಂದಿದೆ. ಭಕ್ತರಿಗೆ ಅನುಕೂಲ ಮಾಡಲು ಯಾರೂ ಕಾಳಜಿ ವಹಿಸಿಲ್ಲ.
ಕೆಟ್ಟು ನಿಂತ ಹೈಮಾಸ್ಟ್ ದೀಪ
ದೇವಸ್ಥಾನದ ಹೊಸ ಬಸ್ ನಿಲ್ದಾಣಕ್ಕೆ ಹೊಂದಿಕೊಂಡು ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಕೆಟ್ಟು ಹಲವು ತಿಂಗಳು ಗತಿಸಿದರೂ ದುರಸ್ತಿ ಮಾಡಿಲ್ಲ. ಅಮರೇಶ್ವರ ಕ್ರಾಸ್‌ನಿಂದ ದೇವರಭೂಪೂರವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಧಿಕಾರಿಗಳು-ಗುತ್ತಿಗೆದಾರರ ಗುದ್ದಾಟದಿಂದ ಸೊರಗಿ ಸುಣ್ಣವಾಗಿದೆ. ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ವಾಣಿಜ್ಯ ಮಳಿಗೆಗಳು, ಕಲ್ಯಾಣ ಮಂಟಪ, ವಸತಿ ಗೃಹಗಳ ಬಾಡಿಗೆ, ಹುಂಡಿ ಹಣ, ನಾಟಕ, ತೆಂಗಿನಕಾಯಿ ಹರಾಜು ಸೇರಿದಂತೆ ವಿವಿಧ ಮೂಲಗಳಿಂದ ಪ್ರತಿ ವರ್ಷ 1 ಕೋಟಿ ರೂ. ಆದಾಯ ಬರುತ್ತದೆ. ದೇವಸ್ಥಾನದಲ್ಲಿ ಸಾಕಷ್ಟು ಹಣ ಇದ್ದರೂ ಮೂಲ ಸೌಕರ್ಯ ಕಲ್ಪಿಸಲು ಹಿಂದೇಟು ಹಾಕುತ್ತಿರುವುದು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕಾರಣ ಎಂದು ಭಕ್ತರು ದೂರುತ್ತಿದ್ದಾರೆ.
ಅಧಿಕಾರಿಗಳ ಸಭೆ ಕರೆದು ಜಾತ್ರೋತ್ಸವ ಸಿದ್ಧತೆ ಹಾಗೂ ಮೂಲ ಸೌಕರ್ಯ ಒದಗಿಸುವ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು.
ಜಾತ್ರೆ ಸಮೀಪಿಸುತ್ತ ಬಂದರೂ ಪೂರ್ವ ಸಿದ್ಧತೆಗೆ ಆಸಕ್ತಿ ವಹಿಸಿಲ್ಲ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಅಧಿಕಾರಿಗಳು ಮುಂದಾಗಬೇಕು.