ಅಮೀನಗಡದಲ್ಲಿ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. 
ರಾಯಚೂರು

ನಮಗೆ ಇಬ್ಬರು ವಾರ್ಡನ್ ಬೇಡ, ಒಬ್ಬರೇ ಸಾಕು

ಕವಿತಾಳ: ಅಮೀನಗಡದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಬಾಲಕಿಯರ ವಸತಿ ನಿಲಯದಲ್ಲಿ ಇಬ್ಬರು ವಾರ್ಡನ್‌ಗಳು ಬೇಡ, ಒಬ್ಬರೇ ಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿನಿಯರು ಶನಿವಾರ ಮಧ್ಯಾಹ್ನ ಊಟ ತ್ಯಜಿಸಿ ದಿಢೀರನೇ ಪ್ರತಿಭಟನೆ ನಡೆಸಿದರು.
ಈ ವಸತಿ ನಿಲಯದಲ್ಲಿ ಪ್ರೌಢ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಹಾಸ್ಟೆಲ್‌ಗೆ ಎನ್‌ಜಿಒ ಮೂಲಕ ನೇಮಕವಾದ ಗಂಗಮ್ಮ 5 ವರ್ಷಕ್ಕ್ಕೂ ಹೆಚ್ಚು ದಿನಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿನಿಯರು ಮತ್ತು ವಾರ್ಡನ್ ಮಧ್ಯೆ ಆಗಾಗ ವಾಗ್ವದ ನಡೆಯುವುದರಿಂದ ವಾರದ ಹಿಂದೆ ನಿಂಗಮ್ಮ ಎನ್ನುವರನ್ನು ನೇಮಿಸಲಾಗಿದೆ. 
ಆದರೆ, ಕಳೆದ ಮೂರುದಿನಗಳಿಂದ ಇಬ್ಬರು ವಾರ್ಡನ್‌ಗಳು ಅಧಿಕಾರ ಚಲಾಯಿಸುತ್ತಿದ್ದು, ಯಾರ ಮಾತು ಕೇಳಬೇಕೆಂಬುದು ಗೊಂದಲವಾಗಿದೆ. ಹೀಗಾಗಿ ವಿದ್ಯಾರ್ಥಿನಿಯರು ಶನಿವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿ, ವಾರ್ಡನ್ ಗಂಗಮ್ಮ ನಮಗೆ ಬೇಡ. ಹೊಸದಾಗಿ ಬಂದಿರುವ ನಿಂಗಮ್ಮ ಅವರನ್ನು ಮುಂದುವರಿಸಬೇಕು. ಅಲ್ಲಿವರೆಗೆ ಹೋರಾಟ ಕೈಬಿಡಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಬಂದ ಮುಖ್ಯಶಿಕ್ಷಕ ರಾಯನಗೌಡ ಅವರು, ಬಾಲಕಿಯರ ಮನವೊಲಿಸಲು ಪ್ರಯತ್ನಿಸಿದರು. ತಾತ್ಕಾಲಿಕವಾಬಿ ಸಿಆರ್‌ಸಿ ಸೌಮ್ಯ ಅವರು ವಾರ್ಡನ್ ಆಗಿರಲಿದ್ದಾರೆ. ಸೋಮವಾರ ಅಧಿಕಾರಿಗಳು ಬಂದು ಸಮಸ್ಯೆ ಪರಿಹರಿಸಲಿದ್ದಾರೆ ಎಂದು ಭರವಸೆ ನೀಡಿದ ಬಳಿಕ ಹೋರಾಟ ಕೈಬಿಡಲಾಯಿತು. ಈ ವೇಳೆ ಶಿಕ್ಷಕ ಬಸನಗೌಡ ನಿಲೋಗಲ್, ಎಸ್ಡಿಎಂಸಿ ಅಧ್ಯಕ್ಷ ಹಮೀದ್, ಆದೇಶ ನಾಯಕ, ಬಸವರಾಜ ಇತರರಿದ್ದರು.
"

ನಾನು ಆದೇಶ ಪತ್ರದೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಆದರೆ, ಈ ಮೊದಲಿದ್ದ ವಾರ್ಡನ್ ಏಕೆ ಬಂದಿರುವೆ ಎನ್ನುತ್ತಿದ್ದಾರೆ. ವಿದ್ಯಾರ್ಥಿನಿಯರು ಬೇಡ ಎಂದರೆ ಹಾಗೂ ಆದೇಶ ಹಿಂಪಡೆದರೆ ಹೋಗುತ್ತೇನೆ.

— ನಿಂಗಮ್ಮ ಪೂಜಾರಿ ಹೊಸದಾಗಿ ಬಂದ ವಾರ್ಡನ್
"

ನಾನು ಕಳೆದ ಐದು ವರ್ಷಗಳಿಂದ ಹಾಸ್ಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಲವರು ಇಲ್ಲಸಲ್ಲದ ಆರೋಪಮಾಡಿ ನನ್ನ ವಿರುದ್ಧ ವಿದ್ಯಾರ್ಥಿಗಳನ್ನು ಎತ್ತಿ ಕಟ್ಟುತ್ತಿದ್ದಾರೆ. ನಾನು ಸರಿಯಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ನಾನು ಹೋಗಲ್ಲ.

— ಗಂಗಮ್ಮ ಹಳೇ ವಾರ್ಡನ್