ದೇವದುರ್ಗ ತಾಲೂಕು ಮಸರಕಲ್‌ನಲ್ಲಿ ನಾಲೆಗೆ ನೀರು ಬಿಟ್ಟಿದ್ದರಿಂದ ಭತ್ತನಾಟಿಗೆ ರೈತರು ಗದ್ದೆ ಸಿದ್ಧಪಡಿಸುತ್ತಿರುವುದು.
- ಸರ್ಕಾರದ ನಿರ್ಧಾರ
- ತುರ್ತುಸಭೆ ರದ್ದು
- ಒಳಹರಿವು ನಿಂತರೆ ವಾರಬಂದಿ ಜಾರಿ
ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ ಇದೇ ಮೊದಲ ಸಲ ಐಸಿಸಿ ಸಭೆ ನಡೆಸದೆ ಮುಂಗಾರು ಬೆಳೆಗಾಗಿ ನೀರು ಹರಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಬರದ ನಡುವೆ ಮೊದಲ ಬೆಳೆಗೆ ಜು.28ರಿಂದ ನ.10ವರೆಗೆ ವಾರಬಂದಿ ಪದ್ಧತಿ ಪ್ರಕಾರ 66 ದಿನ ನೀರು ಹರಿಸಲು ನಿರ್ಧರಿಸಿರುವುದು ರೈತರಿಗೆ ಖುಷಿಯಾಗಿದೆ. ಆದರೆ, ಒಳಹರಿವು ಇದ್ದರೂ ವಾರಬಂದಿ ಹಾಕಿರುವ ಬಗ್ಗೆ ಅಪಸ್ವರಗಳು ಕೇಳಿಬರುತ್ತಿವೆ.
ತಾಲೂಕು ಸೇರಿ ಜಿಲ್ಲೆಯಲ್ಲಿ ಮಳೆಯ ಕೊರತೆ ನಡುವೆ ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಿಂದಾಗಿ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯ ತುಂಬಿರುವುದು ಕೃಷಿಕರಿಗೆ ವರದಾನವಾಗಿದೆ. ಆದರೆ, ನೀರು ಬೇಕಾಬಿಟ್ಟಿ ಹರಿಸದೆ ವಾರಬಂದಿ ಪದ್ಧತಿ ಪ್ರಕಾರ ಬಿಡಲು ಸರ್ಕಾರ ಮುಂದಾಗಿದೆ. ಮುಂಗಾರು ಅವಧಿಯ ಮೂರೂವರೆ ತಿಂಗಳಿನಲ್ಲಿ 66 ದಿನ ನಾಲೆಗೆ ನೀರು ಹರಿಸಿ, 50 ದಿನ ಬಂದ್ ಮಾಡಲು ಸರ್ಕಾರ ತೀರ್ಮಾನಿಸಿದೆ.
ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕರೆದಿದ್ದ ನೀರಾವರಿ ಇಲಾಖೆ ಅಧಿಕಾರಿಗಳ ತುರ್ತುಸಭೆ ಸಚಿವ ಸಂಪುಟ ವಿಸ್ತರಣೆ ಗದ್ದಲ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ. ನೀರು ಬಿಡುವ ಬಗ್ಗೆ ಆದೇಶ ಹೊರಡಿಸಿದ್ದು, ಒಳಹರಿವು ಇರುವವರೆಗೆ ವಾರಬಂದಿ ಇಲ್ಲದೆ ನಾಲೆಗೆ ನಿರಂತರವಾಗಿ ನೀರು ಹರಿಯಲಿದೆ. ಒಳಹರಿವು ಸ್ಥಗಿತವಾದರೆ ವಾರಬಂದಿ ಜಾರಿಯಾಗಲಿದೆ.
ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯ ಭರ್ತಿಯಾಗಿದ್ದರೂ ಕೃಷಿಗಾಗಿ ಆಲಮಟ್ಟಿ ಜಲಾಶಯದಿಂದ 97.27ಟಿಎಂಸಿ, ನಾರಾಯಣಪುರ ಡ್ಯಾಂನಿಂದ 18.32 ಟಿಎಂಸಿ ಸೇರಿ ಒಟ್ಟು 115.59ಟಿಎಂಸಿ ಅಡಿ ನೀರು ಕಾಯ್ದಿರಿಸಲಾಗಿದೆ. ಇದರಲ್ಲಿ ಬಲ ಹಾಗೂ ಎಡದಂಡೆ ನಾಲೆಗೆ ಪ್ರತಿದಿನ ಒಂದು ಟಿಎಂಸಿಯಂತೆ 66 ದಿನ 66 ಟಿಎಂಸಿ ಅಡಿ ನೀರು ನಾಲೆಗೆ ಹರಿಸಲಾಗುತ್ತದೆ. ಜು.27ರಿಂದಲೇ ನಾಲೆಗೆ ನೀರು ಬಿಡಲಾಗಿದ್ದು, ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ.
ಯಾವದಿನ ಬಂದ್ -ಯಾವಾಗ ಚಾಲು?
ಎರಡೂ ನಾಲೆಗೆ 66 ದಿನ ಚಾಲು, 50 ದಿನ ಬಂದ್ ಬಗ್ಗೆ ಸರ್ಕಾರ ಸ್ಪಷ್ಟ ದಿನಾಂಕ ಪ್ರಕಟಿಸಿದೆ. ಜು.28ರಿಂದ ಆ.10ರವರೆಗೆ 14ದಿನ ಚಾಲು, ಆ.11ರಿಂದ 20ರ ವರೆಗೆ ಬಂದ್, ಆ.21ರಿಂದ ಸೆ.3ರವರೆಗೆ ಚಾಲು, ಸೆ.4ರಿಂದ 13ರವರೆಗೆ ಬಂದ್, ಸೆ.14ರಿಂದ 27ರ ವರೆಗೆ ಚಾಲು, ಸೆ.28ರಿಂದ ಅ.7ರವರೆಗೆ ಬಂದ್, ಅ.8ರಿಂದ 21ರವರೆಗೆ ಚಾಲು, ಅ.22ರಿಂದ 31ರವರೆ ಬಂದ್ ಹಾಗೂ ಕೊನೆಯಲ್ಲಿ ನ.1ರಿಂದ ನ.10ವರೆಗೆ ಹತ್ತು ದಿನ ಮಾತ್ರ ನಾಲೆಗೆ ನೀರು ಹರಿಸಲಾಗುತ್ತಿದೆ. ಅಕ್ಟೋಬರ್‌ವರೆಗೂ ಒಳಹರಿವು ಇದ್ದರೆ ವಾರಬಂದಿ ಪದ್ಧತಿ ಜಾರಿಯಾಗಲ್ಲ ಎಂದು ಕೆಬಿಜೆಎನ್‌ಎಲ್ ಮೂಲಗಳು ತಿಳಿಸಿವೆ.
"
ಸಚಿವ ರಾಮಲಿಂಗಾರೆಡ್ಡಿ ಕರೆದಿದ್ದ ನೀರಾವರಿ ಇಲಾಖೆ ಅಧಿಕಾರಿಗಳ ತುರ್ತುಸಭೆ ರದ್ದಾಗಿದ್ದು, ನೀರು ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಮೊದಲ ಬೆಳೆಗೆ 66 ದಿನ ನಾಲೆಗೆ ನೀರು ಹರಿಯಲಿದೆ. ವಾರಬಂದಿ ಹಾಕದಂತೆ ಒತ್ತಾಯ ಮಾಡಿತ್ತು. ಒಳಹರಿವು ಇದ್ದರೆ ನಾಲೆಗೆ ನೀರು ನಿರಂತರವಾಗಿ ಹರಿಯಲಿದೆ.
— ಕರೆಮ್ಮ ಜಿ.ನಾಯಕ ಶಾಸಕಿ