ದೇವದುರ್ಗದಲ್ಲಿ ಎಸ್‌ಐಆರ್ ಕುರಿತು ಜಾಗೃತಿ ಜಾಥಾಕ್ಕೆ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ ಚಾಲನೆ ನೀಡಿದರು. ತಾಪಂ ಇಒ ಕೆ.ರಾಜೇಂದ್ರಕುಮಾರ, ಟಿಎಚ್‌ಒ ಬನದೇಶ್ವರ, ತಾಪಂ ಎಡಿ ಅಣ್ಣರಾವ್, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಇತರರಿದ್ದರು. 
ರಾಯಚೂರು

ಮತದಾರರ ಮನೆಗೆ ಮೂರು ಸಲ ಭೇಟಿ

ನರೇಶ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ಆತಂಕ ಬೇಡವೆಂದ ತಹಸೀಲ್ದಾರ್ ನಾಗಮ್ಮ
  • ದೇವದುರ್ಗದಲ್ಲಿ ಜಾಗೃತಿ ಜಾಥಾ
ದೇವದುರ್ಗ: ಚುನಾವಣೆ ಆಯೋಗದ ಸೂಚನೆಯಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಗೆ ಚಾಲನೆ ನೀಡಲಾಗಿದೆ. ಬಿಎಲ್‌ಒಗಳು ಪ್ರತಿಮನೆಗೆ ಮೂರು ಸಲ ಭೇಟಿ ನೀಡಲಿದ್ದು, ಜನರು ಸೂಕ್ತ ಮಾಹಿತಿ, ದಾಖಲೆ ನೀಡಬೇಕು ಎಂದು ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ ಹೇಳಿದರು. 
ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಚುನಾವಣೆ ಆಯೋಗ, ತಾಲೂಕು ಆಡಳಿತ, ತಾಪಂ ಹಾಗೂ ಪುರಸಭೆಯಿಂದ ಆಯೋಜಿಸಿದ್ದ ಎಸ್‌ಐಆರ್ ಅಭಿಯಾನ ಕುರಿತು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. 
ಮತಗಟ್ಟೆ ಮಟ್ಟದ ಅಧಿಕಾರಿಗಳು ಕನಿಷ್ಠ ಮೂರು ಸಲ ಮನೆಗೆ ಭೇಟಿ ನೀಡಲಿದ್ದು, ಆ.5ರಂದು ಪರಿಷ್ಕೃತ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಆ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಸಂಬಂಧಿತ ಬಿಎಲ್‌ಒಗಳಿಗೆ ಮಾಹಿತಿ ನೀಡಿ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬಹುದು ಎಂದರು.
ಹೊಸ ಮತದಾರರ ನೋಂದಣಿಗಾಗಿ ನಮೂನೆ  6 ಭರ್ತಿ ಮಾಡಿ, ಭಾವಚಿತ್ರದೊಂದಿಗೆ ಎರಡು ಪ್ರತಿಗಳಲ್ಲಿ ಸಲ್ಲಿಸಬೇಕು. ಅಗತ್ಯವಿದ್ದಲ್ಲಿ ಮತದಾರರು ಫೋಟೋ ನವೀಕರಿಸಿಕೊಳ್ಳಬಹುದು. ಮತಗಟ್ಟೆ ಮಟ್ಟದ ಅಧಿಕಾರಿಗಳು ಜು.29ರವರೆಗೆ ಮನೆಮನೆಗೆ ಭೇಟಿ ನೀಡಲಿದ್ದು, 18 ವರ್ಷ ಪೂರ್ಣಗೊಂಡ ಯಾವುದೇ ಅರ್ಹ ಮತದಾರರು ನೋಂದಣಿಯಿಂದ ಹೊರಗುಳಿಯದಂತೆ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಜಾಗೃತಿ ಜಾಥಾ ತಾಲೂಕು ಆಡಳಿತ ಸೌಧದಿಂದ ಕೆಇಬಿ ರಸ್ತೆ, ಜೆಪಿ ವೃತ್ತ, ಬಸ್ ನಿಲ್ದಾಣ ರಸ್ತೆ ಮೂಲಕ ಡಾ.ಅಂಬೇಡ್ಕರ್ ವೃತ್ತದವರೆಗೆ ನಡೆಯಿತು. ನೂರಾರು ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು. ತಾಪಂ ಇಒ ಕೆ.ರಾಜೇಂದ್ರಕುಮಾರ, ಟಿಎಚ್‌ಒ ಬನದೇಶ್ವರ, ತಾಪಂ ಎಡಿ ಅಣ್ಣರಾವ್, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಇತರರಿದ್ದರು.