ಸಂತೆಕೆಲ್ಲೂರು ಹತ್ತಿರ ರಾಷ್ಟ್ರೀಯ ಹೆದ್ದಾರಿ-748ಎ ನಿರ್ಮಾಣದ ಬಳಿ ಮಸ್ಕಿ ತಾಲೂಕಿನ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮೇಲುಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ, ಚಾಮರಸ ಮಾಲಿಪಾಟೀಲ, ಬಡಗಲಪುರ ನಾಗೇಂದ್ರ, ಶರಣಪ್ಪ ಉದ್ಬಾಳ, ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ಪಾಟೀಲ, ಬಸನಗೌಡ ಮಟ್ಟೂರು ಭಾಗವಹಿಸಿದ್ದರು.  
ರಾಯಚೂರು

ಹೆದ್ದಾರಿ ನಿರ್ಮಾಣದಿಂದ ಹಳ್ಳಿ ರಸ್ತೆಗಳು ಸರ್ವನಾಶ!

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ ಪುಟ್ಟಣ್ಣಯ್ಯ ಹೇಳಿಕೆ
  • ರೈತರ ಪ್ರತಿಭಟನೆಯಲ್ಲಿ ಮೇಲುಕೋಟೆ ಶಾಸಕ ಭಾಗಿ
ಮಸ್ಕಿ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದಾಗಿ ಗ್ರಾಮೀಣ ರಸ್ತೆಗಳು ನಾಶವಾಗುತ್ತಿವೆ. ಸರ್ಕಾರ ರೈತರ ಹೊಲಗಳಿಗೆ ಹೋಗಲು ಬೇಕಾದ ರಸ್ತೆಗಳನ್ನು ನಿರ್ಮಿಸಿದ ನಂತರವೇ, ಹೆದ್ದಾರಿ ನಿರ್ಮಿಸಬೇಕೆಂದು ಮೇಲುಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಸಂತೆಕೆಲ್ಲೂರು ಹತ್ತಿರ 748ಎ-ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಬಳಿ ಮಸ್ಕಿ ತಾಲೂಕಿನ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು.
ಗ್ರಾಮದಲ್ಲಿ ಹೊಲಗಳಿಗೆ ಹೋಗಲು ನಾಲ್ಕೈದು ರಸ್ತೆಗಳಿರುತ್ತವೆ. ಈಗ ಅದು ನಾಶವಾಗುತ್ತಿದ್ದು, ರೈತರು ಕೃಷಿ ಯಂತ್ರಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಹೆದ್ದಾರಿ ಬದಿಯಲಿ ಅಂಡರ್‌ಪಾಸ್ ಮಾಡಬೇಕು. ಉಳಿದ ರಸ್ತೆಗಳಿಗೆ ಕಡ್ಡಾಯವಾಗಿ ಸರ್ವೀಸ್ ರಸ್ತೆ ನಿರ್ಮಿಸಿಕೊಡಬೇಕೆಂದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ರೈತರ ಹೋರಾಟದಲ್ಲಿ ನಾವು ಜತೆಗಿದ್ದು, ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು.
ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಸ್ತೆ ವಂಚಿತ ರೈತರ ಹೋರಾಟ ಸಮಿತಿಯ ಸಂಚಾಲಕ ಶರಣಪ್ಪ ಉದ್ಬಾಳ, ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ಪಾಟೀಲ, ಪ್ರಮುಖರಾದ ಬಸನಗೌಡ ಮಟ್ಟೂರು, ಮಲ್ಲಣ್ಣ ಗೌಡರು, ನಾಗರಾಜ ಗುಡಿಹಾಳ, ಈರಣ್ಣ ಗುಡಿಹಾಳ, ಅಮರೇಗೌಡ ಗೋನವಾರ, ಮಲ್ಲಣ್ಣ ಹೊಸಮನಿ, ತಿಪ್ಪನಗೌಡ ಗೋನವಾರ, ಶಿವನಗೌಡ ವಟಗಲ್, ಬಸನಗೌಡ ಕುಣಿಕೆಲ್ಲೂರು, ಬಾಲಾಜಿ ಗೋನವಾರ ಇತರರಿದ್ದರು.