ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸಿದ್ಧಾಂತ ಶಿಖಾಮಣಿ ಧರ್ಮ ಸಂದೇಶ ನೀಡಿದರು. 
ರಾಯಚೂರು

ವೀರ ವ್ರತ ಪರಿಪಾಲಕರು ವೀರಶೈವರು

ಪ್ರಮುಖ ಮುಖ್ಯಾಂಶಗಳು

  • ಕಾಶಿಪೀಠ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ
  • ಲಿಂಗಸುಗೂರು ದೇವರಭೂಪೂರ ಧರ್ಮ ಸಂದೇಶ
ಲಿಂಗಸುಗೂರು: ಯಾರು ವೀರ ವ್ರತ ಪರಿಪಾಲನೆ ಮಾಡುತ್ತಾರೋ ಅವರಿಗೆ ವೀರಶೈವರು ಎನ್ನುತ್ತಾರೆಂದು ಕಾಶಿಪೀಠ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ದೇವರಭೂಪೂರ ಗ್ರಾಮದಲ್ಲಿ ಬೃಹನ್ಮಠದಲ್ಲಿ ಸಿದ್ಧಾಂತ ಶಿಖಾಮಣಿ ಧರ್ಮ ಸಂದೇಶ ನೀಡಿದ ಅವರು, ಭಾದ್ರಪದ ಮಾಸದಲ್ಲಿ ಗಣಪತಿ ವ್ರತ, ನವರಾತ್ರಿಯಲ್ಲಿ ದೇವಿ ವ್ರತ, ಶ್ರಾವಣ ಮಾಸದಲ್ಲಿ ಸೋಮವಾರಗಳ ವ್ರತ ಮಾಡುತ್ತೇವೆ. ಅನೇಕ ವ್ರತಗಳಿದ್ದರೂ ವೀರಶೈವರ ಲಿಂಗಪೂಜೆ ವ್ರತ ಒಮ್ಮೆ ಪ್ರಾರಂಭವಾದರೆ ಪ್ರಾಣ ಹೋದರೂ ಪೂಜೆಯಲ್ಲಿ ಲೋಪವಾಗುವುದಿಲ್ಲ. ಗ್ರಾಮದ ಸ್ವಾಮಿಗಳು ಬಂದು ಲಿಂಗವನ್ನು ಕೈಯಲ್ಲಿಟ್ಟು ವಿಧಿವತ್ತಾಗಿ ಪೂಜೆ ಮಾಡಿ ಪುನಃ ಲಿಂಗವನ್ನು ಕೊರಳಲ್ಲಿ ಕಟ್ಟಿ ಲಿಂಗದ ಜತೆಗೆ ಸಮಾಧಿ ಮಾಡುವುದರಿಂದ ಅದನ್ನು ಲಿಂಗಪೂಜೆ ಮಹಾವ್ರತ ಎಂದು ಕರೆಯುತ್ತಾರೆ ಎಂದರು.
ಲಿಂಗ ಕಟ್ಟಿಕೊಂಡರೆ ನಿನ್ನ ಶಿರಚ್ಛೇದ ಮಾಡುತ್ತೇವೆ ಅಥವಾ ಸಂಪತ್ತು ಲೂಟಿ ಮಾಡುವ ಬೆದರಿಕೆ ಹಾಕಿದರೂ ಲಿಂಗಪೂಜೆ ವ್ರತವನ್ನು ಬಿಡುವುದಿಲ್ಲ ಎಂದು ಹೇಳುವವನೇ ನಿಜವಾದ ವೀರಶೈವ. ಯಾರ ದೇಹದ ಮೇಲೆ ಸದಾ ಲಿಂಗ ಇರುತ್ತದೆಯೋ ಅವರೇ ವೀರಶೈವರು ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ದೇವರಭೂಪೂರು ಗುರು ಗಜದಂಡ ಸ್ವಾಮೀಜಿ, ಕೊಡೇಕಲ್ಲ ಶಿವಕುಮಾರ ಸ್ವಾಮೀಜಿ, ನೀಲಗಲ್ಲ ಬೃಹನ್ಮಠದ ರೇಣುಕಾ ಶಾಂತಮಲ್ಲ ಶಿವಾಚಾರ್ಯರು, ಡಾ.ಪಂಚಾಕ್ಷರಿ ಶಿವಾಚಾರ್ಯರು, ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು, ಗುಳೆದ ಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ರಾಯಚೂರು ಮಂಗಳವಾರಪೇಟೆ ಹಿರೇಮಠದ ವೀರ ಸೋಮೇಶ್ವರ ಸ್ವಾಮೀಜಿ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಶರಣು ಸಾಹುಕಾರ ಚಿಂಚರಕಿ ಇತರರಿದ್ದರು.