ಶಂಕರ ಬಿದರಿ 
ರಾಯಚೂರು

ವೀರಶೈವ-ಲಿಂಗಾಯತ ಧರ್ಮ ಒಂದೇ, ಆಚರಣೆಯಲ್ಲಿ ವ್ಯತ್ಯಾಸ

ಪ್ರಮುಖ ಮುಖ್ಯಾಂಶಗಳು

  • ಮಾನ್ವಿಯಲ್ಲಿ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿಕೆ
ಮಾನ್ವಿ: ಕಾನೂನಿನ ಪ್ರಕಾರ ವೀರಶೈವ-ಲಿಂಗಾಯತ ಧರ್ಮ ಒಂದೇ. ಆದರೆ ಧರ್ಮದ ಆಚರಣೆಯಲ್ಲಿ ಕೆಲವು ಸೂಕ್ಷ್ಮ ವ್ಯತ್ಯಾಸಗಳಿವೆ ಎಂದು ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಡಿಜಿಪಿ ಶಂಕರ ಬಿದರಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2005-2014ರಲ್ಲಿ ಪ್ರತ್ಯೇಕ ಧರ್ಮಕ್ಕಾಗಿ ಮನವಿ ಮಾಡಿದರೂ ಕೂಡ ದೊರೆತಿಲ್ಲ. ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. ಎರಡು ಸಮುದಾಯಗಳು ಕೂಡ ಒಂದೇ ಆಗಿವೆ. ಮಹಾಸಭಾ ಎರಡು ಸಮುದಾಯಗಳ ನಡುವೆ ಸಮನ್ವಯತೆ ಸಾಧಿಸಿ ಕೂಡಿಸಿಕೊಂಡು ಹೋಗುತ್ತಿದೆ ಎಂದರು.
ಪ್ರತ್ಯೇಕ ಧರ್ಮಕ್ಕಾಗಿ ಪ್ರಯತ್ನ ಮಾಡಲಾಗಿದ್ದರೂ ಕಾನೂನಿನ ಮಾನ್ಯತೆ ದೊರೆಯುತ್ತಿಲ್ಲ. ಸಮಾಜದಲ್ಲಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದವರನ್ನು ಬಿಟ್ಟರೆ ಉಳಿದವರೆಲ್ಲರೂ ಹಿಂದೂಗಳು. ವೀರಶೈವ ಲಿಂಗಾಯತರು ಸರ್ಕಾರದ ಮಟ್ಟದಲ್ಲಿ ಜಾತಿ ಪ್ರಮಾಣ ಪತ್ರ ನೀಡುವಾಗ ಎಲ್ಲ ವೀರಶೈವ ಲಿಂಗಾಯತರಿಗೆ ಒಂದೇ ಜಾತಿ ಹೆಸರಿನಲ್ಲಿ ಪ್ರಮಾಣ ಪತ್ರ ನೀಡುತ್ತಿದೆ. ಮೂಲ ಜಾತಿ, ಉಪಜಾತಿಗಳನ್ನು ಪರಿಗಣಿಸಿ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಸಮುದಾಯ ಜನರ ಒತ್ತಾಯವಾಗಿದ್ದು, ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಸರ್ಕಾರ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಹೆಚ್ಚಿನ ಅನುದಾನ ನೀಡುವಂತೆ ಸಿಎಂರನ್ನು ಒತ್ತಾಯಿಸಲಾಗುವುದು. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ರಾಜ್ಯದ ವೀರಶೈವ ಲಿಂಗಾಯತ ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳ ಸಂಪೂರ್ಣವಾದ ಮಾಹಿತಿಯುಳ್ಳ ಕೈಪಿಡಿಯನ್ನು ಹೊರ ತರಲಾಗುವುದು ಎಂದರು. ಇದಕ್ಕೂ ಮನ್ನ ಮಹಾಸಭಾ ರಾಜ್ಯ ಸಮಿತಿ ಸದಸ್ಯ ಸಿದ್ದಲಿಂಗಪ್ಪ ವಕೀಲರ ಮನೆಯಲ್ಲಿ ಸಮಾಜದಿಂದ ಸನ್ಮಾನ ಸ್ವೀಕರಿಸಿದರು. 
ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರ, ತಾಲೂಕು ಅಧ್ಯಕ್ಷ ಅರುಣಚಂದಾ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸಿದ್ದಲಿಂಗಪ್ಪ ವಕೀಲ, ರಾಜ್ಯ ಕಾರ್ಯನಿರ್ವಾಹಕ ಸದಸ್ಯರಾದ ರಾಯಚೂರಿನ ವಿಜಯಕುಮಾರ ಸಜ್ಜನ್, ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕರ, ತಿಮ್ಮರೆಡ್ಡಿ ಭೋಗಾವತಿ, ಮಲ್ಲನಗೌಡ ನಕ್ಕುಂದಿ, ಕಿಡಿಗಣ್ಯಯ್ಯಸ್ವಾಮಿ, ಶ್ರೀಧರಸ್ವಾಮಿ, ಹರಿಹರ ಪಾಟೀಲ್, ಶರಣಪ್ಪಗೌಡ ನಕ್ಕುಂದಿ ಇತರರಿದ್ದರು.