ಸಿರವಾರ: ಯುಗಾದಿ ಹಬ್ಬದ ಅಂಗವಾಗಿ ಪಟ್ಟಣದ ಶ್ರೀ ದುರುಗಮ್ಮ ದೇವಿ ಜಾತ್ರೆ ಅಂಗವಾಗಿ ರೈತರಿಗಾಗಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಕಲ್ಲೂರು ಬಸವರಾಜ ನಾಯಕ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.18ರಂದು ಬೆಳಗ್ಗೆ ಸಿರವಾರ ಪಟ್ಟಣದ ಎತ್ತುಗಳಿಗಾಗಿ ಮಾತ್ರ ಗಿರಕಿಬಂಡಿ ಸ್ಪರ್ಧೆ, ರಾತ್ರಿ ಅಖಂಡ ಭಜನೆ ನಡೆಯಲಿದೆ. ಮಾ.19ರಂದು ಬೆಳಗ್ಗೆ ರಾಯಚೂರು ಜಿಲ್ಲೆಯ ಕಿಲಾರಿ ಎತ್ತುಗಳಿಗಾಗಿ 1.5 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. ಮಧ್ಯಾಹ್ನ 2 ರಿಂದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.
ಮಾ.19ರಂದು ಸಂಜೆ6 ಕ್ಕೆ ಉಚ್ಚಾಯ ಮಹೋತ್ಸವ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು. ಪ್ರಮುಖರಾದ ಎಚ್.ಕೆ.ಶಿವಗ್ಯಾನಿ, ಸಣ್ಣ ನಾಗರಾಜ ಚಿನ್ನಾನ, ರಮೇಶ ಮಟ್ಲಗೌಡ, ವೆಂಕನಗೌಡ ಬೆಳವಿನೂರ, ಮಂಜುನಾಥ ಜಾಲಾಪುರ, ಎಚ್.ಕೆ.ಚನ್ನಬಸವ, ಗಂಗಪ್ಪ ಪೂಜಾರಿ ಜಾಲಾಪುರ, ಕಪ್ಪಲ್ ತಿಮ್ಮಯ್ಯ ಇತರರಿದ್ದರು.