ಸಿಂಧನೂರಿನಲ್ಲಿ ವ್ಯಸನಮುಕ್ತ ಬದುಕಿಗಾಗಿ ವಚನ ಶ್ರವಣ ಕಾರ್ಯಕ್ರಮದ ಕರಪತ್ರವನ್ನು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪಿ.ರುದ್ರಪ್ಪ ಕುರುಕುಂದ ಬಿಡುಗಡೆಗೊಳಿಸಿದರು.
ಸಿಂಧನೂರು: ಶ್ರಾವಣ ಮಾಸವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಬಸವಕೇಂದ್ರದ ನಾನಾ ಘಟಕಗಳು, ಬಸವ ಚಾರಿಟಬಲ್ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಶರಣ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಆ.13 ರಿಂದ ಸೆ.13ರವರೆಗೆ ವ್ಯಸನಮುಕ್ತ ಬದುಕಿಗಾಗಿ ವಚನ ಶ್ರವಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಸವಕೇಂದ್ರದ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವಲಿಂಗಪ್ಪ ಬಾದರ್ಲಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರಲ್ಲಿ ಬಸವತತ್ವ ಹಾಗೂ ವಚನಗಳ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಒಂದು ತಿಂಗಳು ವಿವಿಧ ಶಾಲೆ-ಕಾಲೇಜ್, ವಸತಿನಿಲಯಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಅನುಭಾವಿಗಳಿಂದ ವಿಷಯ ಮಂಡಿಸಲಾಗುವುದು ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪಿ.ರುದ್ರಪ್ಪ ಕುರುಕುಂದ ಮಾತನಾಡಿ, ಬದುಕಿಗೆ ಬೇಕಾಗಿರುವ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ವಚನ ಶ್ರವಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಬಸವಕೇಂದ್ರದ ತಾಲೂಕು ಅಧ್ಯಕ್ಷ ಕೆರೇಗೌಡ ಪೊ.ಪಾ., ಪ್ರಮುಖರಾದ ಎಚ್.ಜಿ.ಹಂಪಣ್ಣ, ಚಂದ್ರೇಗೌಡ ಹರೇಟನೂರು, ಗುಂಡಪ್ಪ ಬಳಿಗಾರ, ಪಿ.ಅಮರೇಶ ಕುರುಕುಂದ, ಚಂದ್ರಗೌಡ ಚನ್ನಳ್ಳಿ ಇದ್ದರು.