ಮಾನ್ವಿಯಲ್ಲಿ ನಿವೃತ್ತ ನೌಕರರ ಸಂಘದ ತಾಲೂಕು ಮಟ್ಟದ ಸಮಾವೇಶಕ್ಕೆ ಸಚಿವ ಎನ್.ಎಸ್.ಬೋಸರಾಜು ಚಾಲನೆ ನೀಡಿದರು. ಶಾಸಕ ಹಂಪಯ್ಯನಾಯಕ, ಸನೌಸಂ ಜಿಲ್ಲಾಧ್ಯಕ್ಷ ಮಹಾದೇವಪ್ಪ ಏಗನೂರು, ತಾಲೂಕು ಅಧ್ಯಕ್ಷ ಸುರೇಶ ಕುರ್ಡಿ, ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ರೇವಣಸಿದ್ದಯ್ಯ ಹಿರೇಮಠ ಇತರರಿದ್ದರು. 
ರಾಯಚೂರು

ಆಡಳಿತದಲ್ಲಿ ನಿವೃತ್ತ ನೌಕರರ ಅನುಭವ ಬಳಕೆ

ಪ್ರಮುಖ ಮುಖ್ಯಾಂಶಗಳು

  • ಸಚಿವ ಎನ್.ಎಸ್.ಬೋಸರಾಜು ಹೇಳಿಕೆ
  • ಮಾನ್ವಿ ನಿವೃತ್ತ ನೌಕರರ ಎರಡನೇ ಸಮಾವೇಶ
ಮಾನ್ವಿ: ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ನಿವೃತ್ತ ನೌಕರರ ಅನುಭವ, ಸಲಹೆ, ಮಾರ್ಗದರ್ಶನ ಬಳಸಿಕೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಪಟ್ಟಣದ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ನಿವೃತ್ತ ನೌಕರರ ಎರಡನೇ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಸೇವೆಯಲ್ಲಿ ನೌಕರರಿಗೆ ನಿವೃತ್ತಿ ಎನ್ನುವುದು ಸಹಜವಾಗಿದ್ದು, ನಿವೃತ್ತ ನೌಕರರು ಆಡಳಿತ ವಿಷಯದಲ್ಲಿ ಹೊಂದಿರುವ ಅನುಭವವನ್ನು ತಾಲೂಕಿನ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕಿದೆ. ಪಟ್ಟಣದಲ್ಲಿ ಹಿರಿಯ ನಾಗರಿಕರ ಕಟ್ಟಡ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿ ಅನುದಾನವನ್ನು ಮಂಜೂರು ಮಾಡಿಸಲು ಕ್ರಮವಹಿಸಲಾಗುವುದು. ನಿವೃತ್ತ ನೌಕರರಿಗೆ ತಮ್ಮ ನಿವೃತ್ತ ಜೀವನವನ್ನು ನೆಮ್ಮದಿಯಾಗಿ ಕಳೆಯುವುದಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಲಿದೆ ಎಂದು ತಿಳಿಸಿದರು.
ಶಾಸಕ ಹಂಪಯ್ಯನಾಯಕ ನಿವೃತ್ತ ನೌಕರರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಾದೇವಪ್ಪ ಏಗನೂರು ವಿಶೇಷ ಉಪನ್ಯಾಸ ನೀಡಿದರು. 70ವರ್ಷ ಪೂರೈಸಿದ ಹಿರಿಯ ನಾಗರಿಕರಿಗೆ, ಭೂದಾನಿ ವಿ.ರವಿಬಾಬು ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಕೆ.ಅಂಬರೇಶಪ್ಪ, ಪ್ರಮುಖರಾದ ಶಾಂತಪ್ಪ, ಅಂಬೇರಾವ್ ವಾಡೇಕರ್, ಶರಣಪ್ಪ ಕೆ.ಗುಡದಿನ್ನಿ, ಹಂಪಣ್ಣ ಚಂಡೂರು, ನಿವೃತ್ತ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಸೂರ್ಯಕಾಂತ ಕದಮ್, ನಯೋಪ್ರಾ ಅಧ್ಯಕ್ಷ ಅಬ್ದುಲ್ ಗಪೂರ್‌ಸಾಬ್, ಪ್ರಮುಖರಾದ ಮಡಿವಾಳಯ್ಯ ನಂದಿಕೋಲಮಠ, ಕೆ.ವೀರಪ್ಪ, ಚಂದ್ರಶೇಖರಯ್ಯ ಗಡ್ಡಿಮಠ, ಡಿ.ಜಿ.ಕರ್ಕಿಹಳ್ಳಿ, ಶ್ರೀಶೈಲಗೌಡ, ಮೂಕಪ್ಪ ಕಟ್ಟಿಮನಿ, ರಾಮಲಿಂಗಪ್ಪ, ಕುಬೇರಪ್ಪ ಇನ್ನಿತರರಿದ್ದರು.