ಸಿಂಧನೂರಿನಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶ್ರೀ ಪರಾಭವನಾಮ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪಗೆ ಕಲ್ಯಾಣ ಕರ್ನಾಟಕ ಕಣ್ಮಣಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಯುಗಾದಿ ಉತ್ಸವ ಸಮಿತಿ ಸಂಚಾಲಕ ವೈ.ನರೇಂದ್ರ ನಾಥ, ಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಇತರರಿದ್ದರು. 
ರಾಯಚೂರು

ಪ್ರಕೃತಿಯಲ್ಲಿ ಬದಲಾವಣೆಗೆ ಯುಗಾದಿ ನಾಂದಿ

ಪ್ರಮುಖ ಮುಖ್ಯಾಂಶಗಳು

  • ಸಿಂಧನೂರಿನಲ್ಲಿ ಮಾಜಿ ಸಚಿವ ವೆಂಕಟರಾವ ನಾಡಗೌಡ ಅನಿಸಿಕೆ
  • ಯುಗಾದಿ ಉತ್ಸವ ಕಾರ್ಯಕ್ರಮ
  • ರಾಯಚೂರಿನ ಡಾ.ಆಧ್ಯಾ ಹನುಮಂತುಗೆ ಪ್ರಶಸ್ತಿ ಪ್ರದಾನ
ಸಿಂಧನೂರು: ಹಬ್ಬ-ಹರಿದಿನಗಳು ಜನರಲ್ಲಿ ಸಾಮರಸ್ಯದ ಭಾವನೆ ಮೂಡಿಸಲು ಸಹಕಾರಿಯಾಗಿವೆ ಎಂದು ಮಾಜಿ ಸಚಿವ ವೆಂಕಟರಾವ ನಾಡಗೌಡ ಹೇಳಿದರು.
ನಗರದ ಸತ್ಯಗಾರ್ಡನ್‌ನಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶ್ರೀ ಪರಾಭವನಾಮ ಯುಗಾದಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುಗಾದಿ ಪ್ರಕೃತಿಯಲ್ಲಿ ಬದಲಾವಣೆಗೆ ನಾಂದಿ ಹಾಡುತ್ತದೆ. ನಮ್ಮ ಸಂಸ್ಕೃತಿ ಪ್ರಕಾರ ಜ.1 ಹೊಸ ವರುಷವಲ್ಲ, ಯುಗಾದಿಯೇ ನವ ಸಂವತ್ಸರ. ಎಲ್ಲರೂ ಸಂಭ್ರಮ, ಸಡಗರದಿಂದ ಆಚರಿಸುವ ಹಬ್ಬವಾಗಿದೆ. ಪ್ರಕೃತಿಯಲ್ಲಿ ಹೊಸ ಚಿಗುರು ಮೂಡುವ ಮೂಲಕ ಹೊಸ ವರ್ಷ ಆರಂಭವಾಗುತ್ತದೆ ಎಂದರು.
ಕಲ್ಯಾಣ ಕರ್ನಾಟಕ ಕಣ್ಮಣಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಯುಗಾದಿ ಉತ್ಸವದ ಹೆಸರಿನಲ್ಲಿ ಸಾಧಕರನ್ನು ಗುರುತಿಸುವ ಸಂಪ್ರದಾಯ ಶ್ಲಾಘನೀಯ. ಯುಗಾದಿಯಿಂದಲೇ ನಮ್ಮ ಬದುಕು ಆರಂಭವಾಗುತ್ತದೆ. ಹೊಸತನಕ್ಕೂ ನಾಂದಿಯಾಡುತ್ತದೆ. ನಮ್ಮ ಸಂಸ್ಕೃತಿ ಉಳಿಯಬೇಕೆಂಬ ಸಂಕಲ್ಪ ಪ್ರತಿಯೊಬ್ಬರೂ ಮಾಡಬೇಕೆಂದು ತಿಳಿಸಿದರು.
ಡಾ.ಬಿ.ಎನ್.ಪಾಟೀಲ್ ಮಾತನಾಡಿ, ಯುಗಾದಿಯಲ್ಲಿ ಬೇವು-ಬೆಲ್ಲ ಕೂಡಿರಬೇಕು. ಇದು ಸುಖ, ದುಃಖಗಳನ್ನು ಸಮೀಕರಿಸುತ್ತದೆ. ಎರಡನ್ನು ಸಮಾನವಾಗಿ ಸ್ವೀಕರಿಸಿದಾಗ ಜೀವನ ಸುಂದರವಾಗಿರುತ್ತದೆ ಎಂದರು. ಯುಗಾದಿ ಉತ್ಸವ ಸಮಿತಿ ಸಂಚಾಲಕ ವೈ.ನರೇಂದ್ರನಾಥ ಮಾತನಾಡಿ, ಕಳೆದ 20 ವರ್ಷಗಳಿಂದ ಯುಗಾದಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಇಬ್ಬರು ಸಾಧಕರ‌್ನು ಗುರುತಿಸಿ ಕಕ ಕಣ್ಮಣಿ ಪ್ರಶಸ್ತಿ ನೀಡಿ, ಗೌರವಿಸುವ ಸಂಪ್ರದಾಯ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಂಠದಾನ ಕಲಾವಿದರಾದ ರಾಯಚೂರಿನ ಡಾ.ಆಧ್ಯಾ ಹನುಮಂತುಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಸಂಚಾಲಕರಾದ ಬೀರಪ್ಪ ಶಂಭೋಜಿ, ಎಂ.ಭಾಸ್ಕರ್, ಅಮರೇಶಪ್ಪ ಮೈಲಾರ, ಸರಸ್ವತಿ ಪಾಟೀಲ್, ಶಾಂತಗೌಡ ಜಾಗೀರದಾರ, ಡಾ.ಚನ್ನನಗೌಡ ಪಾಟೀಲ್, ಎನ್.ಸತೀಶ, ಆರ್.ಸಿ.ಪಾಟೀಲ್, ಸುಮಿತ್ ತಡಕಲ್, ಶರಣಪ್ಪ ಗೋನಾಳ, ಚಂದ್ರಶೇಖರ ಯರದಿಹಾಳ ಇತರರಿದ್ದರು.