ತಿಮ್ಮಮ್ಮನವರ ಆರಾಧನಾ ಮಹೋತ್ಸವ ನಿಮಿತ್ತ ಪಲ್ಲಕ್ಕಿ ಉತ್ಸವ ಜರುಗಿತು.
ಮುದಗಲ್: ಪ್ರತಿ ವರ್ಷದಂತೆ ಹೂನೂರು ಗ್ರಾಮದ ಶ್ರೀಕ್ಷೇತ್ರ ಅಮ್ಮನಕಟ್ಟೆಯಲ್ಲಿ ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರ 213ನೇ ಆರಾಧನೆ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.
ಭಜನಾ ಮಂಡಳಿ ಹಾಗೂ ವಿವಿಧ ವಾದ್ಯಗಳಿಂದ ಹೂನೂರು ಗ್ರಾಮದ ಮೂಲಕ ಅದ್ದೂರಿಯಾಗಿ ಸುಕ್ಷೇತ್ರ ಅಮ್ಮನ ಕಟ್ಟೆಗೆ ತಿಮ್ಮಮ್ಮರನ್ನು ಪಲ್ಲಕ್ಕಿ ಮೆರವಣಿಗೆ ಮೂಲಕ ಕರೆತರಲಾಯಿತು. ಈ ವೇಳೆ ಭಕ್ತರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದರು. ಭಾಗವತ ಪ್ರವಚನ ಕಾರ್ಯಕ್ರಮ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ ಹಾಗೂ ದಾಸವಾಣಿ ಕಾರ್ಯಕ್ರಮ ನಡೆಯಿತು. ಕಿಡದೂರು, ಹೂನೂರು, ತುರಡಗಿ ಹಾಗೂ ಸುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.