ಗೊರೇಬಾಳದಲ್ಲಿ ಏರ್ಪಡಿಸಿದ್ದ ಮೂರನೇ ಹಂತದ ನಿರ್ಮಲ ತುಂಗಭದ್ರಾ ಪಾದಯಾತ್ರೆ ಸಭೆಯನ್ನು ಗಣ್ಯರು ಉದ್ಘಾಟಿಸಿದರು.
- ರಾಷ್ಟ್ರೀಯ ಸ್ವಾಭಿಮಾನ ಅಂದೋಲನದ ಅಧ್ಯಕ್ಷ ಬಸವರಾಜ ಪಾಟೀಲ್ ಹೇಳಿಕೆ
ಗೊರೇಬಾಳ: ಮೂರು ರಾಜ್ಯಗಳಿಗೆ ಕುಡಿಯಲು ಮತ್ತು ಕೃಷಿಗೆ ನೀರೊದಗಿಸುವ ತುಂಗಭದ್ರಾ ನದಿ ಅಪಾಯದ ಅಂಚಿನಲ್ಲಿದ್ದು, ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಸ್ವಾಭಿಮಾನ ಅಂದೋಲನದ ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪುರ ಹೇಳಿದರು.
ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಅಂದೋಲನ, ಕರ್ನಾಟಕ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ, ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಕೈಗೊಂಡಿರುವ ಮೂರನೇ ಹಂತದ ನಿರ್ಮಲ ತುಂಗಭದ್ರಾ ಪಾದಯಾತ್ರೆ ಸೋಮವಾರ ಸಂಜೆ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.
ಅಭಿಯಾನದ ಪ್ರಧಾನ ಸಂಚಾಲಕ ಮಹಿಮಾ ಪಟೇಲ್ ಮಾತನಾಡಿ, ಪಶ್ಚಿಮ ಘಟ್ಟದ ದಟ್ಟ ಅರಣ್ಯಗಳ ಒಡಲಿನಲ್ಲಿ ಹುಟ್ಟುವ ತುಂಗ ಭದ್ರಾ ನದಿಯೂ ತನ್ನ ಉಪನದಿ, ಕಿರುತೊರೆ, ಹಳ್ಳಗಳ ಮೂಲಕ ಮಲೆನಾಡು, ಬಯಲು ಸೀಮೆಗೆ ನೀರುಣಿಸುವ ಮೂಲಕ ಜೀವನದಿಯಾಗಿದೆ. ಆದರೆ, ಇತ್ತೀಚೆಗೆ ತುಂಗಭದ್ರಾ ಒಡಲಿಗೆ ಬೃಹತ್ ಕೈಗಾರಿಕೆಗಳ ವಿವಿಧ ರೀತಿಯ ತ್ಯಾಜ್ಯಗಳು ಸೇರುತ್ತಿದ್ದು, ಕಲುಷಿತವಾಗುತ್ತಿದೆ. ಇದರಿಂದ ನದಿ ನೀರನ್ನು ನೇರವಾಗಿ ಬಳಸದಂತಾಗಿದೆ ಎಂದರು.
ಎಂಎಲ್ಸಿ ಬಸನಗೌಡ ಬಾದರ್ಲಿ ಮಾತನಾಡಿ, ಜೀವಜಲ ರಕ್ಷಣೆಗೆ ನಾವೆಲ್ಲರೂ ಟೊಂಕಕಟ್ಟಿ ಅಭಿಯಾನದ ಜತೆಗೆ ನಿಲ್ಲುತ್ತೇವೆ ಎಂದರು. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮಾಜಿ ಶಾಸಕ ವೆಂಕಟರಾವ ನಾಡಗೌಡ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ನರಗುಂದದ ಸಿದ್ಧಲಿಂಗ ಶಿವಾಚಾರ್ಯರು, ಯದ್ದಲದೊಡ್ಡಿಯ ಮಹಾಲಿಂಗ ಶ್ರೀಗಳು, ರಾಜಮಾತೆ ಲಲಿತಾ ರಾಣಿ ಶ್ರೀರಂಗದೇವರಾಯುಲು ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಎಂ.ಲಕ್ಷ್ಮಣರಾವ್, ತುರ್ವಿಹಾಳದ ಅಮರಗುಂಡ ಮರಿ ಸ್ವಾಮಿಗಳು, ರೌಡಕುಂದ ಶಿವಯೋಗಿ ಶಿವಾಚಾರ್ಯರು, ಬಂಗಾರಿ ಕ್ಯಾಂಪ್‌ನ ಸದಾನಂದ ತಾತ, ರಾಜುಗೌಡ ಬಾದರ್ಲಿ, ದೊಡ್ಡ ಭೀಮನಗೌಡ ನೆಟೆಕಲ್, ಎಂ. ರಂಗನಗೌಡ, ಮಾಜಿ ಜಿಪಂ ಸದಸ್ಯ ಬಸವರಾಜ ಹಿರೇಗೌಡರ್, ಡಾ.ಚನ್ನನಗೌಡ ಸಿಂಧನೂರ, ಜಾನಪದ ಕಲಾವಿದರಾದ ಸಾಂಭಯ್ಯ ಹಿರೇಮಠ, ಮಲ್ಲಿಕಾರ್ಜುನ ರಡ್ಡೇರ, ಅಮರೇಗೌಡ ಗೊನವಾರ ಇತರರಿದ್ದರು.