ರಾಯರ 355 ನೇ ಆರಾಧನೆ ನಿಮಿತ್ತ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪ್ರಹ್ಲಾದ್ ರಾಜರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.
ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಅಂಗವಾಗಿ ಸಪ್ತರಾತ್ರೋತ್ಸವಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಆ.29 ರಿಂದ 31 ರವರೆ ರಾಯರ ಆರಾಧನೆ ಶ್ರೀಮಠದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಆ.29ರಂದು ಶ್ರೀಮಠದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ರಾಯರಿಗೆ ವಿಶೇಷ ಪೂಜೆ ಕಾರ್ಯಗಳು, ಪೂರ್ವಾರಾಧನೆ ನಿಮಿತ್ತ ತಿರುಮಲ ತಿರುಪತಿ ದೇವಸ್ಥಾನದ ಶೇಷವಸ್ತ್ರ ಪ್ರಸಾದ, ತಮಿಳುನಾಡಿನ ಶ್ರೀರಂಗನಾಥಸ್ವಾಮಿ ದೇಗುಲದ ವಸ್ತ್ರ ಹಾಗೂ ಕಂಚಿಯ ವರದರಾಜ ದೇವಸ್ಥಾನದ ದೇವರ ವಸ್ತ್ರವನ್ನು ರಾಯರಿಗೆ ಸಮರ್ಪಿಸಿ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಗುತ್ತದೆ.
ಸಂಜೆ ಪುಷ್ಕರಣಿಯಲ್ಲಿ ತೆಪ್ರೋತ್ಸವ, ಪ್ರಹ್ಲದ್ ರಾಜರ ಉತ್ಸವ ಮೆರವಣಿಗೆ, ದೀಪೋತ್ಸವ ಮತ್ತು ಯೋಗೀಂದ್ರ ಸಭಾ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಮಠದ ಶ್ರೀಗುರುಸಾರ್ವಭೌಮ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ನಗರಹಳ್ಳಿ ವಾದಿರಾಜಾಚಾರ್ಯ ಮತ್ತು ತಂಜಾವೂರಿನ ಶಾಸ್ತ್ರ ವಿಶ್ವವಿದ್ಯಾಲಯದ ಉಪ ಕುಲಪತಿ ಸುಬ್ರಮಣಿಯನ್ ಅವರಿಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಆ.30ರಂದು ಮಧ್ಯಾರಾಧನೆ ನಿಮಿತ್ತ ರಾಯರಿಗೆ ವಿಶೇಷ ಪಂಚಾಮೃತ ಅಭಿಷೇಕ, ಮಠದ ಪ್ರಾಂಗಣದಲ್ಲಿ ಸುವರ್ಣ ರಥೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಹಾಮಂಗಳಾರತಿ ನೆರವೇರಲಿದೆ.
ಆ.31 ರಂದು ಉತ್ತರಾರಾಧನೆಯ ದಿನ ರಾಯರ ಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ, ಮಹಾರಥೋತ್ಸವ ಮತ್ತು ಭಕ್ತರಿಂದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನಡೆಯಲಿದೆಂದು ಶ್ರೀಮಠ ತಿಳಿಸಿದೆ.