- ವಿವಿಧ ರಾಜ್ಯದ ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ
ರಾಯಚೂರು
ಮುನ್ನೂರು ಕಾಪು ಸಮಾಜದಿಂದ ಪ್ರತಿಬ ವರ್ಷ ಆಚರಣೆ ಮಾಡುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಜೂನ್ 28 ರಿಂದ 30ವರೆಗೆ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆಂದು ಆಚರಣೆ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 25 ವರ್ಷಗಳಿಂದ ಮುಂಗಾರು ಸಾಂಸ್ಕೃತಿಕ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. 26 ನೇ ವರ್ಷ ಮುಂಗಾರು ಸಾಂಸ್ಕೃತಿಕ ಮೂರು ದಿನ ಆಚರಿಸಲು ನಿರ್ಧರಿಸಲಾಗಿದೆ. ನಗರದ ರಾಜೇಂದ್ರ ಗಂಜ್‌ನಲ್ಲಿ ಬೆಳಗ್ಗೆ 8 ಗಂಟೆಗೆ ಕಲ್ಲೇಳೆಯುವ ಸ್ಪರ್ಧೆ ಆರಂಭವಾಗಲಿದ್ದು, ಜೂ.28 ರಂದು ಒಂದುವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಕರ್ನಾಟಕ ರಾಜ್ಯವದರಿಗೆ ಮಾತ್ರ ನಡೆಯಲಿದೆ. ಜೂ.29 ರಂದು ಎರಡು ಟನ್ ಭಾರದ ಕಲ್ಲೆಳೆಯುವ ಸ್ಪರ್ಧೆ ಅಖಿಲ ಭಾರತ ಮಟ್ಟದಲ್ಲಿ ನಡೆಯಲಿದೆ. ಮೂರನೇ ದಿನ ಜೂ. 30 ರಂದು ಎರಡುವರೆ ಟನ್ ಭಾರ ಕಲ್ಲೆಳೆಯುವ ಸ್ಪರ್ಧೆ ನಡೆಯಲಿದೆ.
ಮೂರು ದಿನ ಸಂಜೆ ವಿವಿಧ ರಾಜ್ಯಗಳಿಂದ ಆಗಮಿಸುವ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಜೂ.28 ರಂದು ಮಾರುತಿ ನಗರದಲ್ಲಿ 29 ರಂದು ಗದ್ವಾಲ್ ರಸ್ತೆ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಜೂ.30 ರಂದು ಗಂಜ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ, ಮಹಾರಾಷ್ಟ್ರ, ರಾಜಸ್ತಾನ, ಗುಜರಾತ್ ಬಾಂಬೆ, ಹೈದ್ರಾಬಾದ ಹಾಗೂ ಜಿಲ್ಲೆಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳುತ್ತವೆ.
ಜೂ.30 ರಂದು ಲಕ್ಷಮ್ಮದೇವಿ ದೇವಸ್ಥಾನದಲ್ಲಿ ಮಧ್ಯಾನ 3 ಗಂಟೆಗೆ ಕಲ್ಲು ಗುಂಡು, ಉಸುಕೀನ ಚೀಲ ಎತ್ತುವ ಸ್ಪರ್ಧೆ ನಡೆಯುತ್ತದೆ. ಸಂಜೆ 5 ಗಂಟೆಗೆ ರಾಜೇಂದ್ರ ಗಂಜ್ ಆವರಣದಲ್ಲಿ ಕುಸ್ತಿ ಬಲ ಪ್ರದರ್ಶನ ನಡೆಯಲಿದೆ. ಸ್ಪರ್ಧೆ ವಿಜೇತರಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಮುನ್ನೂರು ಕಾಪು ಸಮಾಜದ ದಾನಿಗಳಿಂದಲೇ 50 ಲಕ್ಷ ರೂ. ವೆಚ್ಚದಲ್ಲಿ ಮೂರು ದಿನ ಕಾರ್ಯಕ್ರಮಗಳನ್ನು ಕಾರಹುಣ್ಣಿಮೆ ಅಂಗವಾಗಿ ನಡೆಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಂಗಿ ನರಸರೆಡ್ಡಿ, ಎನ್.ಶ್ರೀನಿವಾಸರೆಡ್ಡಿ, ಜಿ.ಶೇಖರರೆಡ್ಡಿ, ಉಟ್ಟೂರು ಕೃಷ್ಣಮೂರ್ತಿ, ಪೋಗಲ್ ಚಂದ್ರಶೇಖರ ರೆಡ್ಡಿ, ಗುಡ್ಲಿ ಪ್ರತಾಪರೆಡ್ಡಿ, ಪುಂಡ್ಲ ರಾಜೇಂದ್ರ ರೆಡ್ಡಿ, ಯು.ಗೋವಿಂದರೆಡ್ಡಿ ಇದ್ದರು.