ಬುಲೆರೋ ಗೂಡ್ಸ್ ವಾಹನದಲ್ಲಿ 18 ಜನರ ಕೂಡು ಕುಟುಂಬ ಮೊದಲ ಬಾರಿಗೆ ಮಂತ್ರಾಲಯದ ರಾಯರ ದರ್ಶನಕ್ಕೆ ತೆರಳುತ್ತಿದ್ದ ವೇಳೆ ನಿದ್ದೆ ಮೊಬ್ಬಿನಲ್ಲಿ ಬಂದ ಕಾಂಕ್ರೀಟ್ ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ 8 ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ಗುರುವಾರ ಬೆಳ್ಳಂಬೆಳಗ್ಗೆ ನಡೆದಿದೆ. 
ರಾಯಚೂರು

ರಾಯರ ದರ್ಶನಕ್ಕೆ ಬಂದವರು ಜವರಾಯನ ಪಾಲು


ಚಿಕ್ಕ ಮಂಗಳೂರಿನ ಜಿಲ್ಲೆಯ ತರೀಕೆರೆ ತಾಲೂಕಿನ ಉಡೆವಾ ಗ್ರಾಮದ ಪುಟ್ಟಮ್ಮ (65) ಹಾಗೂ ಮೀನಾಕ್ಷಿ (50) ಹಾಗೂ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶೆಟ್ಟಿಗೆರೆ ಗ್ರಾಮದ ಕುಮಾರ (50), ದೀಪಿಕಾ (42), ಸುನಿಲ್ (40) ಯಶೋಧಮ್ಮ(60) , ಬೆಳ್ಳಿ( 3), ಲೋಲಾಕ್ಷಿ ಮೃತ ದುರ್ದೈವಿಗಳು.

ಉಡೆವಾ ಹಾಗೂ ಶೆಟ್ಟಿಗೆರೆ ಗ್ರಾಮದ ಕೂಡು ಕುಟುಂಬದವರು ಮಕ್ಕಳ ಶಾಲಾ ಕಾಲೇಜು ರಜೆ ಇರುವುದರಿಂದ ಮೊದಲ ಬಾರಿಗೆ ಮಂತ್ರಾಲಯ ರಾಯರ ಕ್ಷೇತ್ರ ಸೇರಿದಂತೆ ಸುತ್ತಮುತ್ತಲಿನ ಬಿಚ್ಚಾಲಿಯ ರಾಯರ ಏಕಶಿಲ ವೃಂದಾವನ, ಪಂಚಮುಖಿ ಅಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಅಂಜನಾದ್ರಿ ಹನುಮಾನ ದೇವಸ್ಥಾನ ಯಾತ್ರೆಗಾಗಿ ಪ್ರವಾಸಕ್ಕೆಂದು 18 ಜನರ ತಂಡ ಬುಧವಾರ ಸಂಜೆ ಉಡೆವಾ ಗ್ರಾಮದಿಂದ ಗೂಡ್ಸ್ ವಾಹನದಲ್ಲಿ ತೆರಳಿದ್ದರು. ಆದರಂತೆ ಗುರುವಾರ ಬೆಳಗ್ಗೆ 4 ಗಂಟೆಯ ಸುಮಾರಿಗೆ ರಾಯಚೂರು ಕಡೆಯಿಂದ ಜವರಾಯನಂತೆ ಬಂದ ಕಾಂಕ್ರೇಟ್ ತುಂಬಿದ ಲಾರಿ ನಿದ್ದೆ ಮೊಬ್ಬಿನಲ್ಲಿ ಡಿಕ್ಕಿ ಹೊಡೆದ ರಭಸಕ್ಕೆ 8 ಜನ ಸ್ಥಳದಲ್ಲಿಯೇ ಮೃತಪಟ್ಟರೆ 10 ಜನರಿಗೆ ಗಂಭೀರ ಗಾಯಗಳಾಗಿದ್ದು, ಅಂಧ್ರ ಪ್ರದೇಶದ ಕರ್ನೂನ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಯಾತ್ರೆಗೆ ಹೋಗಿ ಸಂಭ್ರಮದಿಂದ ಬರುತ್ತಾರೆ ಎಂದು ಕಾಯುತ್ತಿದ್ದ ಉಡೆವಾ ಗ್ರಾಮಸ್ಥರಿಗೆ ಈ ಸುದ್ದಿ ಅತೀವ ಆಘಾತ ತಂದಿದೆ. ಒಂದೇ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಮೃತಪಟ್ಟಿರುವುದರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಂತ್ರಾಲಯ ಠಾಣೆಯ ಪೊಲೀಸರು ಲಾರಿ ಚಾಲಕನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.