ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಬಳಿ ಮುದಗಲ್ ತಾಲೂಕು ಹೋರಾಟ ಸಮಿತಿ ಸದಸ್ಯರ ನಿಯೋಗ ಚರ್ಚಿಸಿದರು. 
ರಾಯಚೂರು

ಸದ್ಯ ಯಾವುದೇ ತಾಲೂಕು ಘೋಷಣೆ ಇಲ್ಲ

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
  • ಮುದಗಲ್ ಹೋರಾಟ ಸಮಿತಿಗೆ ನಿರಾಸೆ
ಮುದಗಲ್: ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಮುದಗಲ್ ತಾಲೂಕು ಕೇಂದ್ರ ಘೋಷಣೆಯಾಗುವ ಭರವಸೆ ಹೊಂದಿದ್ದ ಜನತೆ ಮತ್ತು ತಾಲೂಕು ಹೋರಾಟ ಸಮಿತಿಗೆ ಮತ್ತೆ ನಿರಾಸೆಯಾಗಿದೆ.
ಹೌದು, ಶಾಸಕ ಮಾನಪ್ಪ ವಜ್ಜಲ್ ಮತ್ತು ಮಾಜಿ ಶಾಸಕ ಎಂ.ಗಂಗಣ್ಣನವರ್ ಅಭಿಮಾನಿಗಳ ಬಳಗ, ತಾಲೂಕು ಹೋರಾಟ ಸಮಿತಿ, ಪ್ರಗತಿಪರ, ದಲಿತಪರ ಸಂಘಟನೆ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, 2023ರ ಚುನಾವಣೆ ಸಂದರ್ಭದಲ್ಲಿ ಮುದಗಲ್ ತಾಲೂಕು ಘೋಷಣೆ ಮಾಡುವ ಭರವಸೆ ನೀಡಿರುವುದನ್ನು ಸಿಎಂಗೆ ನೆನಪಿಸಿದರು. ಅಲ್ಲದೆ, ತಾಲೂಕು ಕೇಂದ್ರದ ಅಗತ್ಯತೆ ಬಗ್ಗೆ ನಿಯೋಗದ ಸದಸ್ಯರೆಲ್ಲರೂ ಸಿಎಂ ಗಮನ ಸೆಳೆದರು.
ಇದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಪ್ರಸ್ತುತ 18ಕ್ಕೂ ಹೆಚ್ಚು ಪಟ್ಟಣಗಳನ್ನು ತಾಲೂಕು ಕೇಂದ್ರವನ್ನಾಗಿಸುವ ಬಗ್ಗೆ ಅರ್ಹತೆ ವರದಿ ವಿಶ್ಲೇಷಿಸಬೇಕಿದೆ. ಹಂತ-ಹಂತವಾಗಿ ತಾಲೂಕು ಕೇಂದ್ರಗಳ ಘೋಷಣೆ ಆಗಲಿದೆ. ಸದ್ಯ ಯಾವುದೇ ತಾಲೂಕು ಘೋಷಣೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು. ನಿಯೋಗದ ಸದಸ್ಯರೆಲ್ಲರೂ ನಿರಾಸೆಯಿಂದ ವಾಪಸ್ಸಾದರು.
ನಿಮ್ ಸರ್ಕಾರ ಇದ್ದಾಗ ಯಾಕ್ ಮಾಡಿಲ್ಲ ?: ಶಾಸಕ ಮಾನಪ್ಪ ವಜ್ಜಲ್ ಮುದಗಲ್ ತಾಲೂಕು ಕೇಂದ್ರ ಘೋಷಣೆ ಬಗ್ಗೆ ಸಿಎಂ ಬಳಿ ಮಾತನಾಡಿದಾಗ, ‘ನಿಮ್ ಸರ್ಕಾರ ಇದ್ದಾಗ ಯಾಕೆ ಮಾಡಿಲ್ಲ ? ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ತಾಲೂಕು ಕೇಂದ್ರದ ಘೋಷಣೆ ಮತ್ತು ಕುಡಿವ ನೀರಿನ ಸಮಸ್ಯೆ, ಕೋಟೆ ಉತ್ಸವದ ಬಗ್ಗೆ ಒತ್ತು ನೀಡೋಣ ಎಂದು ಸಿಎಂ ಉತ್ತರಿಸಿದರು.
ಪ್ರಮುಖರಾದ ಎಂ.ಚಂದ್ರಶೇಖರ, ಗುರುಬಸಪ್ಪ ಸಜ್ಜನ್, ಎಸ್.ಎ.ನಯೀಮ್, ಶರಣಪ್ಪ ಕಟ್ಟಿಮನಿ, ಮಂಜುನಾಥ ಬನ್ನಿಗೋಳಕರ, ಕರಿಯಪ್ಪ ಯಾದವ್ ಹಾಗೂ ಹೋರಾಟ ಸಮಿತಿ ಕಾರ್ಯಕರ್ತರಿದ್ದರು.