ಅರಕೇರಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ವಿತರಿಸಲಾಯಿತು. ಪ್ರಾಚಾರ್ಯೆ ಬುದ್ಧಿವಂತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಚಿರಂಜಿವಿ, ಅಮರೇಶ ನಾಯಕ, ಮಂಜುನಾಥ ಇತರರಿದ್ದರು. 
ರಾಯಚೂರು

ಮುಟ್ಟಿನ ಕಪ್ ಬಳಕೆಯಿಂದ ಅಡ್ಡಪರಿಣಾಮವಿಲ್ಲ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ ಸಲಹೆ
  • ಮುಟ್ಟಿನ ಕಪ್ ವಿತರಣೆ
ಅರಕೇರಾ: ಋತುಚಕ್ರದ ಅವಧಿಯಲ್ಲಿ ಪ್ರತಿಯೊಬ್ಬರೂ ಶುಚಿತ್ವ ಹಾಗೂ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಜಿಪಂ, ಆರ್‌ಬಿಎಸ್‌ಕೆ ಸ್ನೇಹ ಕ್ಲೀಕ್‌ನಿಂದ ಗುರುವಾರ ಹಮ್ಮಿಕೊಂಡಿದ್ದ ಮುಟ್ಟಿನ ಕಪ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಋತುಚಕ್ರದ ಸಮಯದಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಶುಚಿ ನ್ಯಾಪ್ಕಿನ್ ನೀಡಲಾಗುತ್ತಿದ್ದು, 16 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳಿಗೆ ಮುಟ್ಟಿನ ಕಪ್ ವಿತರಿಸಲಾಗುತ್ತಿದೆ.
ಇದನ್ನು ಸಿಲಿಕಾನ್ ಲೋಹದಿಂದ ತಯಾರಿಸಲಾಗಿದ್ದು, ಮುಟ್ಟಿನ ಸಮಯದಲ್ಲಿ ಬಳಸಬಹುದು. ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸುಲಭವಾಗಿ ನಿರ್ವಹಣೆ ಮಾಡಬಹುದು. 6-8 ವರ್ಷದವರೆಗೆ ಮರುಬಳಕೆ ಮಾಡಬಹುದು. ಇದು ಸೋಂಕು ತಡೆಗಟ್ಟಿ ಸ್ವಚ್ಛತೆ ಕಾಪಾಡುತ್ತದೆ ಎಂದರು. ಮುಟ್ಟಿನ ಕಪ್ ಬಳಕೆ ವಿಧಾನ, ರಕ್ತ ಹೀನತೆ, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆ ಕುರಿತು ಅರಿವು ಮೂಡಿಸಲಾಯಿತು.
ಪ್ರಾಚಾರ್ಯೆ ಬುದ್ಧಿವಂತಿ, ಸ್ನೇಹ ಕ್ಲೀನಿಕ್ ಆಪ್ತಸಮಾಲೋಚಕ ಚಿರಂಜಿವಿ, ಉಪನ್ಯಾಸಕರಾದ ಅಮರೇಶ ನಾಯಕ, ಮಂಜುನಾಥ, ತಿಮ್ಮಣ್ಣ ನಾಯಕ, ಬೂದೆಪ್ಪ ಯಾದವ್ ಇತರರಿದ್ದರು.