ನಾಗರಾಜ ಪವಾರ 
ರಾಯಚೂರು

ಬಂಜಾರ ನಾಯಕರ ಹತ್ತಿಕ್ಕುವ ಕೆಲಸ

ನರೇಶ್ ಕುಮಾರ್
ಅರಕೇರಾ: ರಾಜಕೀಯ ಷಡ್ಯಂತ್ರದಿಂದ ಕಾಂಗ್ರೆಸ್ ಸರ್ಕಾರ ಬಂಜಾರ ಸಮಾಜದ ಅಸ್ತಿತ್ವವನ್ನು ಕುಗ್ಗಿಸಲು ಹುನ್ನಾರ ನಡೆಸಿದೆ ಎಂದು ರಾಷ್ಟ್ರೀಯ ಘೋರ್ ಸೇನಾ ಭಾರತ ಸಂಘಟನೆ ತಾಲೂಕು ಅಧ್ಯಕ್ಷ ನಾಗರಾಜ ಪವಾರ ಆರೋಪಿಸಿದರು. 
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜಕೀಯ ದುರುದ್ದೇಶದಿಂದ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಅವರ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಬಂಧಿಸಲಾಗಿದೆ. ಉದಯೋನ್ಮುಖ ಬಂಜಾರ ನಾಯಕರನ್ನು ಹತ್ತಿಕ್ಕಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾನೂನು ಯಂತ್ರಾಂಗದ ಹೆಸರಿನಲ್ಲಿ ಮಣಿಸಲು ಪ್ರಯತ್ನಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ದೂರಿದರು. 
ಕಾಂಗ್ರೆಸ್ ಸರ್ಕಾರವು ಬಂಜಾರ ಸಮಾಜವನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕ ದ್ವೇಷ ರಾಜಕಾರಣ ನಡೆಸುತ್ತಿದೆ ಎಂಬ ಆರೋಪಕ್ಕೆ ಇತ್ತೀಚಿನ ಘಟನೆಗಳೇ ಸಾಕ್ಷಿ. ಒಳಮೀಸಲಾತಿ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ. ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಸಂದರ್ಭದಲ್ಲಿ ಒಳಮೀಸಲಾತಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರ ವಿರುದ್ಧ ಕೇಸ್ ದಾಖಲಿಸಲಾಗಿದೆ. 
ಗದಗ ಜಿಲ್ಲೆಯ ಕೆಲವು ಕಾಂಗ್ರೆಸ್ ಪಟ್ಟಭದ್ರ ಹಿತಾಸಕ್ತಿ ನಾಯಕರು ರಾಜಕೀಯ ದ್ವೇಷದಿಂದ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ರಾಜಕೀಯವಾಗಿ ಮುಗಿಸಲು ಲೋಕಾಯುಕ್ತವನ್ನು ಆಯುಧವನ್ನಾಗಿ ಬಳಸಿದ್ದಾರೆ. ಹೀಗೆ ಸಮಾಜದ ಮನೋಭಾವನೆಗಳನ್ನು ಗಾಯಗೊಳಿಸುವ ನಡೆ ಮುಂದುವರಿದರೆ ಅದರ ರಾಜಕೀಯ ಪರಿಣಾಮಗಳು ಗಂಭೀರವಾಗಲಿವೆ ಎಂದು ಎಚ್ಚರಿಸಿದರು. ಬಂಜಾರ ಸಮಾಜದ ಪ್ರಮುಖರಾದ ಶಂಕ್ರಪ್ಪ ಪವಾರ್ ಬಂಡೆಗುಡ್ಡ, ರಾಜಶೇಖರ ರಾಠೋಡ, ರವಿಪವಾರ್, ಮೋನಪ್ಪ, ಬೂದೆಪ್ಪ ಜಂಬಾನಾಯ್ಕ ತಾಂಡಾ, ಸಂಗಮೇಶ ಚವ್ಹಾಣ್, ರಮೇಶ ಪವಾರ ಇದ್ದರು.