ಸಿರವಾರದಲ್ಲಿ ತುಂಗಭದ್ರಾ ಎಡದಂಡೆ ನಾಲೆ ಪಕ್ಷಾತೀತ ಹೋರಾಟಯಿಂದ ನಡೆದ ಸಂಚಾರ ತಡೆ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ತಹಸೀಲ್ದಾರ್ ಅಶೋಕ ಪವಾರ್ ಮಾತನಾಡಿದರು.
ತುಂಗಭದ್ರಾ ಎಡದಂಡೆ ಕಾಲುವೆ ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ಪಕ್ಷಾತೀತ ಹೋರಾಟ ಸಮಿತಿಯಿಂದ ಕೈಗೊಂಡಿದ್ದ ಧರಣಿಯನ್ನು ಬುಧವಾರ ತಾತ್ಕಾಲಿಕವಾಗಿ ಕೈಬಿಡಲಾಯಿತು. ತಹಸೀಲ್ದಾರ್ ಅಶೋಕ ಪವಾರ್ ಸ್ಥಳಕ್ಕೆ ಭೇಟಿ ನೀಡಿ ಕಲಬುರಗಿ ವಿಭಾಗೀಯ ಆಯುಕ್ತರು ಗುರುವಾರ ಸಭೆಗೆ ರೈತರನ್ನು ಆಹ್ವಾನಿಸಿದ್ದಾರೆ ಎಂದು ತಿಳಿಸಿದರು.
ರೈತ ಮುಖಂಡ ಜೆ.ದೇವರಾಜಗೌಡ ಪಾಟೀಲ್ ಮಾತನಾಡಿ, ಅವರು ಪ್ರತಿ ವರ್ಷ ಈ ಭಾಗದ ರೈತರು ನೀರಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ. ನಮ್ಮ ಭಾಗದಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಾದರೆ ನಾಲೆ ಮೇಲ್ಭಾಗದಲ್ಲಿನ ಅಧಿಕಾರಿಗಳನ್ನು ಬದಲಾವಣೆ ಮಾಡಬೇಕು. ನಮ್ಮ ಭಾಗದ ನೀರು ನಮಗೆ ನೀಡಬೇಕು. ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಜೆ.ಶರಣಪ್ಪಗೌಡ ಮಾತನಾಡಿ, ಕಲಬುರಗಿಯಲ್ಲಿ ವಿಭಾಗೀಯ ಆಯುಕ್ತರು ಕರೆದಿರುವ ಸಭೆಯಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸಿ ನೀರು ಹರಿಸುವ ಭರವಸೆ ನೀಡಿದರೆ ಸರಿ. ಇಲ್ಲದಿದ್ದರೆ ಶುಕ್ರವಾರ ನಮ್ಮ ಹೋರಾಟ ಮುಂದುವರಿಸೋಣ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಧ್ಯಾಹ್ನದವರೆಗೆ ನೀರಾವರಿ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಲಾಯಿತು. ಸ್ಥಳಕ್ಕೆ ಯಾವುದೇ ಅಧಿಕಾರಿ ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ರಾಯಚೂರು-ಲಿಂಗಸೂಗುರು ಮಾರ್ಗದಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿ ಅಂಗಡಿ ಮುಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್ ನಡೆಸಲಾಯಿತು.
ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಗಂಗಾಧರ ನಾಯಕ, ಬಸನಗೌಡ ಬ್ಯಾಗವಾಟ್, ಚಾಮರಸ ಮಾಲಿಪಾಟೀಲ್, ಎಲ್.ವಿ.ಸುರೇಶ, ಎನ್.ಆರ್.ಪಾಟೀಲ್, ಹರವಿ ಶಂಕರಗೌಡ, ವಿಜಯರಾಣಿ, ಅನಿತಾ ನವಲಕಲ್, ಸಿದ್ದರಾಮಯ್ಯ ಸ್ವಾಮಿ, ಎಂ.ಪ್ರಕಾಶಪ್ಪ, ಜೆ.ಶಿವರಾಮರೆಡ್ಡಿ ಗೌಡ, ಎಚ್.ಕೆ.ಅಮರೇಶ, ಅಮರೇಶ ಚಾಗಬಾವಿ, ಕೋಟ್ರೇಶಪ್ಪ ಕೋರಿ ಇತರರಿದ್ದರು.