ಟಿ.ಯಶವಂತ  
ರಾಯಚೂರು

ಕೃಷಿ ಭೂಮಿ ಉಳಿಸಲು ಹೋರಾಟವೇ ಶಕ್ತಿ

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ರಾಜ್ಯ ಕಾರ್ಯದರ್ಶಿ ಟಿ.ಯಶವಂತ ಹೇಳಿಕೆ
ಹಟ್ಟಿಚಿನ್ನದಗಣಿ: ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿಯಾಗಿರುವುದರಿಂದ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಡೆಗೆ ಪ್ರಮುಖ ಕಾರಣವಾಗಿದೆ ಎಂದು ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಟಿ.ಯಶವಂತ ಹೇಳಿದರು.
ಪಟ್ಟಣದ ಪೈ ಭವನದಲ್ಲಿ ಭಾನುವಾರ ಹಮಿಕ್ಕೊಂಡಿದ್ದ ಪ್ರಾಂತ ರೈತ ಸಂಘದ 14ನೇ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ರೈತರು ಬೆಳೆಗೆ ನೀರಿಲ್ಲವೆಂದರೆ ಸ್ವತಃ ಬೃಹತ್ ಹೋರಾಟಗಳ ಮೂಲಕ ಕಾಲುವೆಗಳನ್ನು ದುರಸ್ತಿ ಮಾಡಿಸಿ ಹೊಲಗಳಿಗೆ ನೀರು ತರಿಸಿಕೊಂಡಿದ್ದಾರೆ. ಸರ್ಕಾರದ ಅನುಕೂಲಕ್ಕೇ ಎಲ್ಲವನ್ನೂ ಬಿಟ್ಟುಕೊಟ್ಟು ಕುಳಿತಿಲ್ಲ, ಹೊಲ-ಗದ್ದೆಗಳನ್ನು ಉಳಿಸಿಕೊಳ್ಳಲು ಹೋರಾಟವೇ ನಮ್ಮ ಶಕ್ತಿ, ಪರಂಪರೆ ಎಂದರು.
ವಿಧಾನಸಭೆಯಲ್ಲಿ ರೈತರ ಧ್ವನಿ ಕೇಳಿಸದಿರುವುದು ಸಮಸ್ಯೆಯ ಮೂಲ. ಆದ್ದರಿಂದ ರೈತರು ರಾಜಕೀಯದಲ್ಲಿ ಬೆಳೆದರೆ ಮಾತ್ರ ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಗಟ್ಟಿಯಾದ ವೇದಿಕೆ ಸಿಗುತ್ತದೆ. ಹೊಲ-ಗದ್ದೆಗಳಲ್ಲಿನ ಶ್ರಮ ಗಾಳಿಗೆ ಹೋಗದಂತೆ ಮಾಡಲು ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ರೈತರ ಧ್ವನಿ ಗುಡುಗಿನಂತೆ ಸದ್ದು ಮಾಡಬೇಕಾಗಿದೆ ಎಂದರು.
ಕೃಷಿ, ನೀರಾವರಿ, ಪಶುಪಾಲನೆ, ಆದಾಯ, ತಾಲೂಕು ಕಚೇರಿ ಸೇರಿ ವಿವಿಧ ಇಲಾಖೆಗಳಲ್ಲಿ ಭಾರಿ ಸಿಬ್ಬಂದಿ ಕೊರತೆ ಇದೆ. ಇದರಿಂದ ಸರ್ಕಾರ ಕಚೇರಿಗಳು ಕುಸಿದು ಬೀಳುವ ಹಂತಕ್ಕೆ ಬಂದಿವೆ. ರೈತರಿಗೆ ಸೇವೆ ನೀಡಬೇಕಾದ ಇಲಾಖೆಗಳೇ ಕ್ರಮ ವಹಿಸಲು ವಿಳಂಬ ಮಾಡುತ್ತಿವೆ. ಖಾಲಿ ಹುದ್ದೆಗಳು ಭರ್ತಿಯಾದರೆ ಕಾರ್ಯಕ್ಷಮತೆ ಹೆಚ್ಚುತ್ತದೆ, ರೈತರಿಗೂ ಪ್ರಯೋಜನ ವಾಗುತ್ತದೆ ಎಂದರು.
ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಸಿಪಿಎಂ ತಾಲೂಕ ಕಾರ್ಯದರ್ಶಿ ರಮೇಶ ವೀರಾಪುರ, ಜನವಾದಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಶಕುಂತಲಾ ಪಾಟೀಲ್, ಕೆಪಿಆರ್‌ಎಸ್ ಜಿಲ್ಲಾ ಉಪಾಧ್ಯಕ್ಷ ಬಸವಂತರಾಯಗೌಡ, ಕೆ.ಜಿ.ವೀರೇಶ, ಪೆಂಚಲಯ್ಯ, ಫಕ್ರುದ್ದೀನ್, ದೇವೇಂದ್ರಗೌಡ, ವೆಂಕಟೇಶ ಗೋರ‌್ಕಲ್, ಕರಿಯಪ್ಪ ಅಚ್ಚೊಳ್ಳಿ, ಯಂಕೋಬ ಮಿಯ್ಯಪುರ, ನಿಂಗಪ್ಪ, ಹನೀಫ್, ವನಜಾಕ್ಷಿ, ಆಂಜನೇಯ್ಯ, ಹಾಜಿ ಕಟ್ಟಿಮನಿ, ಮಹಾಂತೆಶ ಇತರರಿದ್ದರು.