ಹಟ್ಟಿಯಲ್ಲಿ ಅಖಿಲ ಭಾರತ ಕಿಸಾನ್ ಸಭಾ ಸಂಸ್ಥಾಪನಾ ದಿನವನ್ನು ಭಾನುವಾರ ಆಚರಿಸಲಾಯಿತು.
ಹಟ್ಟಿಚಿನ್ನದಗಣಿ: ಭಾರತದ ರೈತ ಚಳವಳಿಯ ಇತಿಹಾಸದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಸ್ಥಾಪನೆ ಮಹತ್ವದ ಘಟ್ಟವಾಗಿತ್ತು ಎಂದು ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ರಮೇಶ ವೀರಾಪುರ ಹೇಳಿದರು.
ಅಖಿಲ ಭಾರತ ಕಿಸಾನ್ ಸಭಾ ಸಂಸ್ಥಾಪನಾ ದಿನದ ಅಂಗವಾಗಿ ಹಟ್ಟಿಯ ಪೈ ಭವನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.
1936ರ ಏ.11ರಂದು ಲಕ್ನೋದಲ್ಲಿ ಆರಂಭವಾದ ಈ ಸಂಘಟನೆ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ನಡೆದಿದ್ದ ರೈತ ಚಳವಳಿಗಳನ್ನು ಒಗ್ಗೂಡಿಸಿ ರಾಷ್ಟ್ರ ಮಟ್ಟದ ವೇದಿಕೆಯಾಗಿ ರೂಪುಗೊಂಡಿತು. ಸ್ವಾತಂತ್ರ್ಯ ಪೂರ್ವದಲ್ಲಿ ಉತ್ತರ ಪ್ರದೇಶ, ಬಿಹಾರ, ಬಂಗಾಳ, ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಹಾಗೂ ತಮಿಳುನಾಡುಗಳಲ್ಲಿ ರೈತರ ಭೂಹಕ್ಕು, ಗೇಣಿದಾರರ ಸಮಸ್ಯೆಗಳು ಹಾಗೂ ಕೂಲಿ ಕಾರ್ಮಿಕರ ಹಕ್ಕುಗಳಿಗಾಗಿ ನಡೆದ ಹೋರಾಟ ಸ್ವಾತಂತ್ರ್ಯ ಚಳವಳಿಯ ಭಾಗವಾಗಿಯೂ ಬೆಳೆಯಿತು ಎಂದು ತಿಳಿಸಿದರು.
ಕಿಸಾನ್ ಸಭಾ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಪೆಂಚಲಯ್ಯ ಧ್ವಜಾರೋಹಣ ನೆರವೇರಿಸಿದರು.ರೈತ ಸಂಘಟನೆಗಳು ಒಗ್ಗೂಡಿ ಕೃಷಿ ನೀತಿಗಳಲ್ಲಿ ಬದಲಾವಣೆ ತರಲು ಹೋರಾಟಗಳನ್ನು ಬಲಪಡಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಸಿಐಟಿಯು ಹಟ್ಟಿ ಘಟಕದ ಫಕೃದ್ದೀನ್, ಕಾರ್ಯದರ್ಶಿ ವೆಂಕಟೇಶ ಗೋರ್‌ಕಲ್, ಮುಖಂಡರಾದ ನಿಂಗಪ್ಪ, ದಾವೂದ್, ಮಹಾಂತೇಶ, ಶ್ರೀಧರ್, ಶಂಶುದ್ದೀನ್ ಹಾಗೂ ಜನವಾದಿ ಮಹಿಳಾ ಸಂಘಟನೆ ಮುಖಂಡರಾದ ಸಾಹೀರಾಬಾನು, ದುರುಗಮ್ಮ, ರಜಿಯಾ ಬೇಗಂ, ಗಾಯತ್ರಿ, ಹುಲಿಗೆಮ್ಮ, ಶಿವಮ್ಮ, ಅನುರಾಧಾ, ಭಾರತಿ, ಹುಸೇನಬೀ ಇತರರಿದ್ದರು.