ಗುರುಗುಂಟಾದ ಗೊಲ್ಲರದೊಡ್ಡಿ ಸರ್ಕಾರಿ ಶಾಲೆಯ ಹೊರನೋಟ .
ಗುರುಗುಂಟಾ: ಗ್ರಾಮದ ಏಳನೇ ವಾರ್ಡ್‌ನಲ್ಲಿರುವ ಗೊಲ್ಲರದೊಡ್ಡಿ ಸ.ಕಿ.ಪ್ರಾ. ಶಾಲೆಯ ಮುಖ್ಯಶಿಕ್ಷಕ ವೀರೇಶ ಕಳೆದ ಒಂದೂವರೆ ತಿಂಗಳಿಂದ ಶಾಲೆಗೆ ಬಂದಿಲ್ಲ. ಇದರಿಂದಾಗಿ ಶಾಲೆಯ ಶೈಕ್ಷಣಿಕ ವಾತಾವರಣ, ಮಧ್ಯಾಹ್ನದ ಬಿಸಿಯೂಟ ಹಾಗೂ ಕಚೇರಿ ಕೆಲಸದ ಮೇಲೆ ಪರಿಣಾಮ ಬೀರಿದೆ.
ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ 60 ವಿದ್ಯಾರ್ಥಿಗಳಿದ್ದು, ಒಬ್ಬ ಕಾಯಂ ಹಾಗೂ ಒಬ್ಬ ಅತಿಥಿ ಶಿಕ್ಷಕಿ ಬೋಧನೆ ಮಾಡುತ್ತಾರೆ. ಎಸ್‌ಐಆರ್ ಕೆಲಸಕ್ಕೆ ನಿಯೋಜನೆಗೊಂಡಿರುವ ಮುಖ್ಯಶಿಕ್ಷಕ ವೀರೇಶ, ಈ ಕಾರಣದಿಂದ ಒಂದೂವರೆ ತಿಂಗಳಿಂದ ಶಾಲೆಯತ್ತ ಬಂದಿಲ್ಲ ಎಂಬುದು ಪಾಲಕರ ಆರೋಪವಾಗಿದೆ.
ವರ್ಗಾವಣೆ, ಶಾಲಾ ದೃಢೀಕರಣ, 371 ಜೆ, ಗ್ರಾಮೀಣ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣಪತ್ರ ಪಡೆಯಲು ಪಾಲಕರು ಶಾಲೆಗೆ ಅಲೆದಾಡುತ್ತಿದ್ದಾರೆ. ವಿದ್ಯಾರ್ಥಿಗಳ ಹಾಜರಾತಿ ಹಾಗೂ ಶೈಕ್ಷಣಿಕ ಮಾಹಿತಿ ದಾಖಲಿಸುವ ಸ್ಯಾಟ್ಸ್ ತಂತ್ರಾಂಶ ಕಾರ್ಯ ಕೂಡ ಸ್ಥಗಿತಗೊಂಡಿದೆ. ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ (ಯುಡೈಸ್) ವೆಬ್‌ಸೈಟ್‌ನಲ್ಲಿ ಈ ಶಾಲೆಯ ವ್ಯವಸ್ಥೆ ಮಾಹಿತಿ ಕೂಡ ಇಲ್ಲದಂತಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.