ಸಿಂಧನೂರಿನ ತಹಸಿಲ್ ಕಚೇರಿಯಲ್ಲಿ ಭಾನುವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಚಿವ ವೆಂಕಟರಾವ ನಾಡಗೌಡ, ವೀರನಗೌಡ ಬಾದರ್ಲಿ, ಡಾ.ಬಿ.ಎನ್.ಪಾಟೀಲ್ ಇತರರಿದ್ದರು.
ಸ್ತ್ರೀಕುಲದ ಗೌರವ ಹೆಚ್ಚಿಸಿದ ಮಹಾಸಾಧ್ವಿ The great sage who raised the respect of women
* ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ
ಸಿಂಧನೂರು: ಹೇಮರಡ್ಡಿ ಮಲ್ಲಮ್ಮ ಸ್ತ್ರೀಕುಲದ ಅನರ್ಘ್ಯ ರತ್ನ. ಅವರ ಆದರ್ಶ, ದಿಟ್ಟತನ ಎಲ್ಲ ಮಹಿಳೆಯರಿಗೂ ಆದರ್ಶವಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ತಹಸಿಲ್ ಕಚೇರಿಯಲ್ಲಿ ಆಯೋಜಿಸಿದ್ದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಶ್ರೀಶೈಲ ಮಲ್ಲಿಕಾರ್ಜುನ ಮೇಲೆ ಅಪಾರ ನಂಬಿಕೆ ಹೊಂದಿ, ಭಾವನಾತ್ಮಕ ಜೀವಿಯಾಗಿ, ಮಾನಸಿಕ ಶಿವಲಿಂಗ ದೀಕ್ಷೆ ತೊಟ್ಟು ಸಮಾಜ, ನಾಡು, ನುಡಿ ಹಾಗೂ ಮನುಕುಲದ ಉದ್ಧಾರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸ್ತ್ರೀಕುಲದ ಗೌರವ ಹೆಚ್ಚಿಸಿದ, ಅರ್ಥಪೂರ್ಣ ಬದುಕು ಸಾಗಿಸಿದ ಮಲ್ಲಮ್ಮನ ವಿಚಾರಧಾರೆಗಳು ಮನೆ-ಮನಕ್ಕೆ ತಲುಪುವಂತಾಗಬೇಕು ಎಂದರು.
ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, 14ನೇ ಶತಮಾನದ ಶಿವಶರಣರಲ್ಲಿ ಪ್ರಜ್ವಲಿಸಿದ ಹೇಮರಡ್ಡಿ ಮಲ್ಲಮ್ಮ ದೈವಭಕ್ತಿ, ಕಾಯಕ ನಿಷ್ಠೆ, ದಾನ-ಧರ್ಮದಿಂದ ಆದರ್ಶ ಗೃಹಿಣಿಯಾಗುವ ಮೂಲಕ ಲೋಕ ಪ್ರಸಿದ್ಧಿ ಪಡೆದಿದ್ದರು. ಹೇಮರಡ್ಡಿ ಮಲ್ಲಮ್ಮ ಬದುಕು ಮನುಕುಲಕ್ಕೆ ಆದರ್ಶವಾಗಿದೆ ಎಂದರು.
ಐಎಂಎ ತಾಲೂಕು ಅಧ್ಯಕ್ಷ ಡಾ.ಬಿ.ಎನ್.ಪಾಟೀಲ್, ಪ್ರಮುಖರಾದ ವೀರನಗೌಡ ಬಾದರ್ಲಿ, ಶಾಂತಗೌಡ ಜಹಗೀರದಾರ, ಮಲ್ಲನಗೌಡ ಮಾವಿನಮಡು, ಬಸವರಾಜ ಮೈಲಾಪುರ, ದೊಡ್ಡನಗೌಡ ಬಾದರ್ಲಿ, ಮಲ್ಲಿಕಾರ್ಜುನ ಜೀನೂರು, ಸತ್ಯನಗೌಡ ಒಳಬಳ್ಳಾರಿ, ಹೊನ್ನನಗೌಡ ಬೆಳಗುರ್ಕಿ, ಸರ್ವೋತ್ತಮರಡ್ಡಿ, ರಡ್ಡಿ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ವಕೀಲ ಕುರುಕುಂದ, ಪರ್ವತರಡ್ಡಿ ಹತ್ತಿಗುಡ್ಡ, ರವಿಕುಮಾರ ಪನ್ನೂರು, ಬಸವ ಗೊರೇಬಾಳ ಇದ್ದರು.