ಆಷಾಢ ಶುದ್ಧ ಪೂರ್ಣಿಮೆಯ ನಿಮಿತ್ತ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನಿಧ್ಯದಲ್ಲಿ ಮೃತ್ತಿಕಾ ಸಂಗ್ರಹಣ ಮಹೋತ್ಸವ ನಡೆಯಿತು.
ರಾಯಚೂರು ಆಷಾಢ ಶುದ್ಧ ಪೂರ್ಣಿಮೆಯ ನಿಮಿತ್ತ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನಿಧ್ಯದಲ್ಲಿ ಮೃತ್ತಿಕಾ ಸಂಗ್ರಹಣ ಮಹೋತ್ಸವವು ಅತ್ಯಂತ ವೈಭವದಿಂದ ನೆರವೇರಿತು.
ಶ್ರೀಗಳು ಶ್ರೀಮಠದಿಂದ ಭವ್ಯ ಮೆರವಣಿಗೆಯಲ್ಲಿ ತುಂಗಭದ್ರಾ ನದಿಯ ಮಧ್ಯದಲ್ಲಿರುವ ತುಳಸಿ ವನದವರೆಗೆ ತೆರಳಿದರು. ಅಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಲಾಯಿತು. ಬಳಿಕ ಸಂಗ್ರಹಿಸಿದ ಮೃತ್ತಿಕೆಯನ್ನು ಸುವರ್ಣ ಪಲ್ಲಕಿಯಲ್ಲಿ ತಂದು ಶ್ರೀ ರಾಯರ ಸನ್ನಿಧಿಗೆ ಕರೆತಂದು ರಾಯರ ಬೃಂದಾವನದ ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಲಾಯಿತು.
ನಂತರ ಗುರುಪೌರ್ಣಿಮೆ ಅಂಗವಾಗಿ ಶ್ರೀಮಠದ ಭಕ್ತರಿಂದ ಪೀಠಾದಿಪತಿ ಶ್ರೀ ಸುಬುಧೇಂದ್ರ ತೀರ್ಥರಿಗೆ ಕಲ್ಲುಸಕ್ಕರೆ ಹಾಗೂ ಬೆಲ್ಲದೊಂದಿಗೆ ತುಲಾಭಾರ ಸೇವೆಯನ್ನು ಸಮರ್ಪಿಸಿದರು. ಬಳಿಕ ಭಕ್ತರು ಪುಷ್ಪವೃಷ್ಟಿ ನಡೆಸಿ ಶ್ರೀಗಳ ಮೇಲೆ ಹೂವಿನ ಮಳೆಗರೆದು ತಮ್ಮ ಭಕ್ತಿ ಮತ್ತು ಗೌರವವನ್ನು ವ್ಯಕ್ತಪಡಿಸಿದರು.