ಜೆಡಿಎಸ್ ನೇತೃತ್ವದಲ್ಲಿ ಮಂಗಳವಾರ ಸಿಂಧನೂರಿನಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆ, ಪಾದಯಾತ್ರೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಕೃಷ್ಣ ರೆಡ್ಡಿ, ಶಾಸಕರಾದ ಸಿ.ಬಿ. ಸುರೇಶ ಬಾಬು, ಕರೆಮ್ಮ ಜಿ.ನಾಯಕ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಶರಣೇಗೌಡ ಕಂದಕೂರು ಇತರರಿದ್ದರು.
ಸಿಂಧನೂರು: ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರ ಸಂಕಷ್ಟಕ್ಕೆ ಸ್ಪಂದಿಸದ ನಾಚಿಗೇಡಿನ ಸರ್ಕಾರ ಇದಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಮಾನ-ಮರ್ಯಾದೆಯೇ ಇಲ್ಲವೆಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಎಪಿಎಂಸಿ ಆವರಣದಲ್ಲಿ ಜೆಡಿಎಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಬೂಟಾಟಿಕೆ ಸಭೆ ನಡೆಸಿ ಕೈತೊಳೆದುಕೊಳ್ಳುವುದು ನಮ್ಮ ಹೋರಾಟವಲ್ಲ. ತುಂಗಭದ್ರಾ ಜಲಾಶಯ ನಂಬಿಕೊಂಡಿರುವ ರೈತರ ಬದುಕು ಹಸನು ಮಾಡಲು ನಾವು ಹೊರಟಿದ್ದೇವೆ. ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕರನ್ನು ಒಳಗೊಂಡಂತೆ ವಿಶೇಷ ಚರ್ಚೆ ನಡೆಸಿ, ಸಮಸ್ಯೆಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ನಿರ್ಧರಿಸಿದ್ದಾರೆ ಎಂದರು.
ಎರಡನೇ ಬೆಳೆಗೆ ನೀರು ಕೊಡಬೇಕು, ಇಲ್ಲವೇ ಎಕರೆಗೆ 25 ಸಾವಿರ ರೂ. ಪರಿಹಾರ ಕೊಡಬೇಕು ಮತ್ತು ರೈತರ ಸಾಲಮನ್ನಾ ಮಾಡಬೇಕೆನ್ನುವ ಬೇಡಿಕೆ ಇಟ್ಟಿದ್ದೇವೆ. ನಿರಂತರ ಮಳೆಯಿಂದ ರೈತರು ಹೆಚ್ಚಿನ ನಷ್ಟ ಅನುಭವಿಸಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ, ರೈತರ ಬಗ್ಗೆ ಸರ್ಕಾರ ಕಿಂಚಿತ್ತ್ತೂ ಕಾಳಜಿ ವಹಿಸದೆ, ಕುರ್ಚಿಗಾಗಿ ಬಡಿದಾಡುತ್ತಿದೆ. ಶಾಸಕರನ್ನು ಖರೀದಿ ಮಾಡಲು ಹಣ ಇದೆ. ಆದರೆ, ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ ರಿಪೇರಿಗೆ ಹಣವಿಲ್ಲ. ಈ ಸರ್ಕಾರಕ್ಕೆ ರೈತರ ಅಭಿವೃದ್ಧಿ ಬೇಕಾಗಿಲ್ಲ. ಜೆಡಿಎಸ್ ಪಕ್ಷ ರೈತರ ಒಳಿತು ಬಯಸುತ್ತದೆ. ಅವರಿಗೆ ಗೌರವ ತಂದುಕೊಡುವ ಕೆಲಸ ಮಾಡುತ್ತದೆ. ಗ್ಯಾರಂಟಿ ನೀತಿಯಿಂದ ರಾಜ್ಯದ ಅಭಿವೃದ್ಧಿ ಬಡವಾಗಿದೆ. ನವಲಿ ಜಲಾಶಯ ಡಿಪಿಆರ್‌ಗೆ ಸೀಮಿತವಾಗಿದೆ. ನೀರಾವರಿ ಯೋಜನೆಗಳನ್ನು ಕಡೆಗಣಿಸಲಾಗಿದೆ ಎಂದರು.
ಶಾಸಕ ಶರಣೇಗೌಡ ಕಂದಕೂರು ಮಾತನಾಡಿ, ರೈತರ ಪರವಾಗಿ ಧ್ವನಿ ಎತ್ತುವ ಪಕ್ಷ ಜೆಡಿಎಸ್. ಆದರೆ, ದುಡಿಯುವ ಎತ್ತುಗಳನ್ನು ಮನೆಗೆ ಕಳಿಸಿ, ದುಡಿಯದೆ ಸ್ವಾರ್ಥಕ್ಕಾಗಿ ಬಡಿದಾಡುವ ಎತ್ತುಗಳನ್ನು ಆರಿಸಿ ಕಳಿಸಿದ್ದೀರಿ. ದಪ್ಪ ತೊಗಲಿನ ಸರ್ಕಾರ ಇದಾಗಿದೆ ಎಂದರು.
ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ಜಲಾಶಯದಲ್ಲಿ 80 ಟಿಎಂಸಿ ನೀರಿದ್ದರೂ, ಎರಡನೇ ಬೆಳೆಗೆ ನೀರು ಕೊಡಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಕ್ರಸ್ಟ್ಗೇಟ್ ತಯಾರಿಸುವವರಿಗೆ ಹಣ ನೀಡದೆ, ಬಾಕಿ ಉಳಿಸಿಕೊಂಡಿದೆ ಎಂದರು.
ದೇವದುರ್ಗ ಶಾಸಕಿ ಕರಿಯಪ್ಪ ನಾಯಕ, ಹಗರಿಬೊಮ್ಮನಹಳ್ಳಿ ಶಾಸಕ ನೇಮಿಚಂದ್ರ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಕೊಪ್ಪಳ ಜೆಡಿಎಸ್ ಪ್ರಮುಖ ಸಿ.ವಿ. ಚಂದ್ರಶೇಖರ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ. ಕೃಷ್ಣ ಮಾತನಾಡಿದರು.
ನಿಖಿಲ್ ಕುಮಾರಸ್ವಾಮಿ, ವೆಂಕಟರಾವ ನಾಡಗೌಡ ನೇತೃತ್ವದಲ್ಲಿ ಸರ್ಕಾರ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಮತ್ತು ಪಾದಯಾತ್ರೆ ಮೆರವಣಿಗೆ ಕೋಟೆ ಈರಣ್ಣ ದೇವಸ್ಥಾನದಿಂದ ನಗರದ ಎಪಿಎಂಸಿವರೆಗೆ ನಡೆಯಿತು. ಮೆರವಣಿಗೆಯಲ್ಲಿ ಎತ್ತಿನ ಬಂಡಿ ಆಕರ್ಷಕವಾಗಿತ್ತು. ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ ರಿಪೇರಿ ಶೀಘ್ರವೇ ಮಾಡಬೇಕು, ಭತ್ತಕ್ಕೆ 500 ರೂ. ಪ್ರೋತ್ಸಾಹ ಧನ ನೀಡಬೇಕು, ಭತ್ತ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂಬ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಯಿತು. ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಕೃಷ್ಣ ರೆಡ್ಡಿ, ಶಾಸಕರಾದ ಸಿ.ಬಿ. ಸುರೇಶ ಬಾಬು, ಕರೆಮ್ಮ ಜಿ. ನಾಯಕ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಶರಣೇಗೌಡ ಕಂದಕೂರು, ನೇಮಿರಾಜ್ ನಾಯ್ಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಸಿ.ವಿ.ಚಂದ್ರಶೇಖರ, ಸಿದ್ದು ಬಂಡಿ, ಎಂ.ವಿರೂಪಾಕ್ಷಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಯುವ ಘಟಕ ಅಧ್ಯಕ್ಷ ರವಿಕುಮಾರ ಪನ್ನೂರು, ನಗರ ಘಟಕ ಅಧ್ಯಕ್ಷ ಅಜಯ ದಾಸರಿ, ಧರ್ಮನಗೌಡ ಮಲ್ಲಾಪುರ, ವೆಂಕಟೇಶ ನಂಜಲದಿನ್ನಿ, ನಾಗೇಶ ಹಂಚಿನಾಳ, ಸುಮಿತ್ ತಡಕಲ್ ಸೇರಿದಂತೆ ರೈತರು ಭಾಗವಹಿಸಿದ್ದರು.