ಲಿಂಗಸುಗೂರಿನ ಪ್ರವಾಸಿ ಮಂದಿರದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಛಲವಾದಿ ಮಹಾಸಭಾದಿಂದ ಸನ್ಮಾನಿಸಲಾಯಿತು. ಬಿಜೆಪಿ ಮುಖಂಡ ಆರ್.ರುದ್ರಯ್ಯ, ಪ್ರಮುಖರಾದ ಲಿಂಗಪ್ಪ ಪರಂಗಿ, ಶರಣಪ್ಪ ಹುನಕುಂಟಿ, ಸಿದ್ದಪ್ಪ ಪರಂಗಿ, ಮಲ್ಲಪ್ಪ ಸರ್ಜಾಪುರ, ಅಮರಪ್ಪ ಸಾಲಿ, ಶಿವಣ್ಣ ಪರಂಗಿ, ಶಿವಪ್ಪ ಮಾಚನೂರು, ರಾಮಯ್ಯ ಗುತ್ತೇದಾರ ಇತರರಿದ್ದರು. 
ರಾಯಚೂರು

ಜಿ ರಾಮ್ ಜಿ ಯೋಜನೆಗೆ ರಾಮನ ಹೆಸರಿಟ್ಟಿಲ್ಲ

ಲಿಂಗಸುಗೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಒಳ್ಳೆಯ ಯೋಜನೆಯಾಗಿದೆ. ಕೆಲಸದ ದಿನಗಳ ಸಂಖ್ಯೆಯನ್ನು 100 ರಿಂದ 125ಕ್ಕೆ ಹೆಚ್ಚಿಸಿದ್ದು, ಗ್ರಾಮೀಣ ಭಾಗದ ಜನರಿಗೆ ಪೂರಕವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಛಲವಾದಿ ಮಹಾಸಭಾ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಬಿ ಜಿ ರಾಮ್ ಜಿ ಯೋಜನೆಗೆ ರಾಮನ ಹೆಸರಿಟ್ಟಿಲ್ಲ. ಅದು ವಿಕಸಿತ ಭಾರತ ಗ್ಯಾರಂಟಿ ರೋಜಗಾರ ಮತ್ತು ಆಜೀವಿಕ (ಗ್ರಾಮೀಣ) ಮಿಷನ್ ಎಂಬುದಾಗಿದೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಮಹಾತ್ಮ ಗಾಂಧಿ ಹೆಸರು ಸೇರಿಸಿದ್ದರು. 
ನಾವು ಯಾರ ಹೆಸರನ್ನು ಸೇರಿಸಿಲ್ಲ. ಕಾಂಗ್ರೆಸ್‌ನವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಈ ಯೋಜನೆಯಲ್ಲಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದ್ದು, ಯಾವುದೇ ರೀತಿಯ ಭ್ರಷ್ಟಾಚಾರ ನಡೆಸಲು ಅವಕಾಶವಿಲ್ಲ ಎಂದರು.
ಅಬಕಾರಿ ಹಗರಣದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಭಾಗಿಯಾಗಿದ್ದಾರೆ. ಲೋಕಾಯುಕ್ತರು ಅಬಕಾರಿ ಅಧಿಕಾರಿ ಮೇಲೆ ದಾಳಿ ಮಾಡಿದಾಗ 25 ಲಕ್ಷ ರೂ. ಸಿಕ್ಕಿದೆ. ಅವರ ಆಡಿಯೋ ವೈರಲ್ ಆಗಿದೆ. ಈ ಬಗ್ಗೆ ನಾವು ಹೋರಾಟ ಮಾಡಿದ್ದೇವೆ. 
ಒಂದು ದಿನ ಸತ್ಯ ಹೊರಬರುತ್ತದೆ. ಸಿಎಂ ಅವರು ಮೂಡಾ ಹಗರಣದಲ್ಲಿ ಭಾಗಿಯಾಗಿಲ್ಲ ಅಂದರು. ಆದರೆ, 14 ಸೈಟ್‌ಗಳನ್ನು ವಾಪಸ್ ಕೊಟ್ಟರು.  ರಾಜ್ಯ ಸರ್ಕಾರ ದಲಿತರಿಗೆ ಮೀಸಲಿಟ್ಟ ಎಸ್ಸಿಪಿ, ಟಿಎಸ್ಪಿ ಸರಿಯಾಗಿ ಬಳಸುತ್ತಿಲ್ಲ. ಎಸ್ಸಿ-ಎಸ್ಟಿಯ 7 ನಿಗಮಗಳಿಗೆ 500 ಕೋಟಿ ರೂ. ಕೊಡಲು ಸಾಧ್ಯವಾಗಿಲ್ಲ ಎಂದು ದೂರಿದರು.