ಲಿಂಗಸುಗೂರಿನಲ್ಲಿ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ. ಉದ್ಘಾಟಿಸಿದರು.  
ರಾಯಚೂರು

ಹಿರಿಯರದು ಭವಿಷ್ಯ ನಿರೂಪಿಸುವ ವ್ಯಕ್ತಿತ್ವ

ಪ್ರಮುಖ ಮುಖ್ಯಾಂಶಗಳು

  • ಲಿಂಗಸುಗೂರಿನಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ. ಅನಿಸಿಕೆ
  • ಹಿರಿಯ ನಾಗರಿಕರ ದಿನಾಚರಣೆ
  • ಹಿರಿಯ ನಾಗರಿಕರಿಗೆ ಅನ್ಯಾಯವಾದಾಗ ತಕ್ಷಣ ನ್ಯಾಯ ದೊರಕಿಸಿಕೊಡಿ
ಲಿಂಗಸುಗೂರು: ಯುವಜನರು ಹಿರಿಯ ನಾಗರಿಕರಿಂದ ಅಮೂಲ್ಯವಾದ ಬುದ್ಧಿವಂತಿಕೆ, ಅನುಭವವನ್ನು ಪಡೆಯಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ. ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ಆರ್‌ಪಿಡಿ ಟಾಸ್ಕ್‌ಫೋರ್ಸ್, ಲಯನ್ಸ್ ಕ್ಲಬ್ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆ, ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ನಾಗರಿಕರನ್ನು ಗೌರವಿಸಿದರೆ ಭೂತಕಾಲ, ಇತಿಹಾಸವನ್ನು ಗೌರವಿಸಿದಂತೆ. ಭವಿಷ್ಯವನ್ನು ನಿರೂಪಿಸುವ ವ್ಯಕ್ತಿತ್ವ ಅವರಿಗಿರುತ್ತದೆ. ಅವರನ್ನು ಬೇಸರಗೊಳಿಸದಂತೆ ಗೌರವ ಕೊಡಬೇಕು ಎಂದು ಸಲಹೆ ನೀಡಿದರು.

ಕಾಯ್ದೆ ಕುರಿತು ಸಾಕಷ್ಟು ಮಾಹಿತಿ ಕೊರತೆ

ವಕೀಲ ನಾಗರಾಜ ಗಸ್ತಿ ಮಾತನಾಡಿ, ಹಿರಿಯ ನಾಗರಿಕ ರಕ್ಷಣಾ ಕಾಯ್ದೆ ಕುರಿತು ಸಾಕಷ್ಟು ಮಾಹಿತಿ ಕೊರತೆ ಇದ್ದು, ಸರ್ಕಾರ, ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಅಗತ್ಯವಿದೆ. ಹಿರಿಯ ನಾಗರಿಕರಿಗೆ ಅನ್ಯಾಯವಾದಾಗ ತಕ್ಷಣ ನ್ಯಾಯ ದೊರಕಿಸಿಕೊಡಲು ಉಪ ವಿಭಾಗಾಧಿಕಾರಿಗಳು ಕ್ರಮವಹಿಸಬೇಕು ಎಂದರು.
ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಮರೇಶಪ್ಪ ಹೂನೂರು, ಬಿಇಒ ಸುಜಾತಾ ಹೂನೂರು, ಗ್ರೇಡ್-2 ತಹಸೀಲ್ದಾರ್ ಬಸವರಾಜ ಝಳಕಿಮಠ, ನಿವೃತ್ತ ಬ್ಯಾಂಕ್ ಅಧಿಕಾರಿ ಕರಿಯಪ್ಪ, ಲಯನ್ಸ ಕ್ಲಬ್ ಅಧ್ಯಕ್ಷ ಸಿದ್ರಾಮಪ್ಪ ಕಾಡ್ಲೂರು, ಸಿಡಿಪಿಒ ನಾಗರತ್ನಾ, ವಿಕಲಚೇತನರ ಸಂಘದ ರಾಜ್ಯಾಧ್ಯಕ್ಷ ಸುರೇಶ ಭಂಡಾರಿ, ತಾಪಂ ಅಧಿಕಾರಿ ಪಂಪನಗೌಡ, ಪ್ರಮುಖರಾದ ಡಿ.ಬಿ.ಸೋಮನಮರಡಿ, ವಿಜಯಲಕ್ಷ್ಮೀ ಹಿರೇಮಠ, ಪಾರ್ವತೆಮ್ಮ, ನಾಗರಾಜ ಅಸ್ಕಿಹಾಳ, ವಿರೂಪಾಕ್ಷಯ್ಯ ಕಾಳಾಪುರ ಇದ್ದರು.