ಮಾನ್ವಿ ತಾಲೂಕು ದೇವಿಪುರ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವೀರ ಯೋಧ ಮಲ್ಲಯ್ಯ ನಾಯಕ ಪೆದರಡ್ಡಿ ಅವರನ್ನು ಶಾಸಕ ಹಂಪಯ್ಯ ನಾಯಕ ಸನ್ಮಾನಿಸಿದರು. ಪ್ರಮುಖರಾದ ಮಾನಪ್ಪ ನಾಯಕ, ಆಂಜನೇಯ ನಾಯಕ ನೀರಮಾನ್ವಿ ಇತರರಿದ್ದರು.
ಮಾನ್ವಿ: ದೇಶದ ಭದ್ರತೆಗಾಗಿ ಮಳೆ, ಚಳಿ ಎನ್ನದೇ ಗಡಿ ಕಾಯುವ ವೀರ ಯೋಧರ ಕಾರ್ಯ ಶ್ಲಾಘನೀಯ ಎಂದು ಶಾಸಕ ಹಂಪಯ್ಯನಾಯಕ ಹೇಳಿದರು.
ತಾಲೂಕಿನ ದೇವಿಪುರ ಗ್ರಾಮದ ದ್ಯಾವಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಶನಿವಾರ ಭಾರತೀಯ ಸೇನೆಯ ಗಡಿ ಭದ್ರತಾ ಪಡೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ ವೀರಯೋಧ ಮಲ್ಲಯ್ಯ ನಾಯಕ ಪೆದರಡ್ಡಿ ಅವರನ್ನು ಸನ್ಮಾನಿಸಿ ಮಾತನಾಡಿದರು. ದೇಶದ ರಕ್ಷಣೆಗೆ ಯೋಧರು ಪ್ರಾಣವನ್ನೂ ಲೆಕ್ಕಿಸದೆ ಹೋರಾಡುತ್ತಾರೆ. ಅವರು ಗಡಿಯಲ್ಲಿ ಕಾರ್ಯನಿರ್ವಹಿಸುವುದಿಂದ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದರು.
ಸಂಸದ ಜಿ.ಕುಮಾರನಾಯಕ ಮಾತನಾಡಿ, ನಿವೃತ್ತ ಯೋಧರಿಗೆ ಸರ್ಕಾರದಿಂದ ದೊರೆಯುವ ನಿವೃತ್ತ ವೇತನ, ಕೃಷಿ ಭೂಮಿ ಸೇರಿದಂತೆ ವಿವಿಧ ಸೌಲಭ್ಯಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ಸಕಾಲದಲ್ಲಿ ಯೋಜನೆಗಳ ಲಾಭ ದೊರೆಯುವಂತೆ ಒತ್ತಾಯಿಸುತ್ತೇನೆ. ದೇಶದ ಭದ್ರತೆಗಾಗಿ ಜೀವನ ಮುಡಿಪಿಡುವ ಯೋಧರು ನಿವೃತ್ತರಾಗಿ ಗ್ರಾಮಗಳಿಗೆ ಬಂದಾಗ ಅವರನ್ನು ತಾಲೂಕು ಆಡಳಿತದಿಂದ ಗೌರವಿಸುವ ಮೂಲಕ ಯುವಕರಲ್ಲಿ ದೇಶ ಪ್ರೇಮ ಮೂಡಿಸಬೇಕು ಎಂದರು.
ಉಟಕನೂರು ಅಡವಿಸಿದ್ಧೇಶ್ವರ ಸಂಸ್ಥಾನಮಠದ ಮರಿಬಸವಲಿಂಗ ದೇಶಿಕೇಂದ್ರ ಶಿವಾಚಾರ್ಯರು, ಸಿಂಧನೂರು ವೆಂಕಟಗಿರಿ ಕ್ಯಾಂಪಿನ ಸದಾನಂದ ಶರಣರು ಆಶೀರ್ವಚನ ನೀಡಿದರು. ಮುಖಂಡರಾದ ಬಿ.ಮಾನಪ್ಪ ನಾಯಕ, ರಾಜಾ ಶ್ಯಾಮಸುಂದರ್ ನಾಯಕ ವಕೀಲ, ಆರ್.ತಿಮ್ಮಯ್ಯನಾಯಕ, ಡಾ.ಬಸವರಾಜಪ್ಪ ಪೋತ್ನಾಳ, ಹನುಮಂತಪ್ಪ ವಕೀಲ ದೇವಿಪುರ, ಬಿ.ಸಿ.ಎಂ.ಅಧಿಕಾರಿ ಬಾಗಯ್ಯ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಬಾಲಯ್ಯ ನಾಯಕ, ಅಂಬಣ್ಣ ನಾಯಕ, ಆಂಜನೇಯ ನಸ್ಲಾಪುರ, ರಾಯಚೂರು ಜಿಲ್ಲಾ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಕಲ್ಲೂರು, ತಾಲೂಕು ಅಧ್ಯಕ್ಷ ಬಸವರಾಜ ನಾಯಕ ಮುಷ್ಟೂರು. ನಿವೃತ್ತ ಯೋಧ ಆಂಜನೇಯ ನಾಯಕ ನೀರಮಾನ್ವಿ ಇತರರಿದ್ದರು.