ಬಳಗನೂರಿನಲ್ಲಿ ಬಂಧು ಶತಪುರೇಶ ದೇವರ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಮಸ್ಕಿ: ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಬಂಧುಶತಪುರೇಶನ ನೂತನ ರಥೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಜಯಘೋಷಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ಮಾರುತಿ ದೇವಸ್ಥಾನದಲ್ಲಿ ಬಂಧುಪುರೇಶನ ವಿಗ್ರಹಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನೂತನ ರಥಕ್ಕೆ ಹೋಮ ಸೇರಿದಂತೆ ವಿವಿಧ ಪೂಜೆಗಳನ್ನು ಸಲ್ಲಿಸಲಾಯಿತು. ನಂತರ ರಥದ ಕಲಶಾರೋಹಣ ನಡೆಯಿತು. ಚಂಡಿ ವಾದನ, ಡೊಳ್ಳು ಕುಣಿತ, ಭಜನೆ ಸೇರಿದಂತೆ ಅನೇಕ ಕಲಾ ತಂಡಗಳು ಪಾಲ್ಗೊಂಡಿದ್ದವು.
ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಸಂಜೆ ಹೂವಿನ ಅಲಂಕೃತ ರಥಕ್ಕೆ ಪೂಜೆ ಸಲ್ಲಿಸಿ ಬಂಧುಪುರೇಶನ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಭಕ್ತರ ಜಯಘೋಷಗಳೊಂದಿಗೆ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು. ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ತಹಸೀಲ್ದಾರ್ ಮಂಜುನಾಥ ಭೋಗಾವತಿ ರಥೋತ್ಸವಕ್ಕೆ ಚಾಲನೆ ನೀಡಿದರು.
ವಿವಿಧ ತಾಲೂಕು, ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಕ್ತರಿಗೆ ಪ್ರಸಾದ ಹಾಗೂ ಕುಡಿವ ನೀರು ಸೇರಿದಂತೆ ಅಗತ್ಯ ವ್ಯವಸ್ಥೆಯನ್ನ ಪಪಂ ಹಾಗೂ ದೇವಸ್ಥಾನ ಸಮಿತಿಯಿಂದ ಮಾಡಲಾಗಿತ್ತು.