MAHANTESH BIRADHAR 
ರಾಯಚೂರು

ಏ.5 ರಂದು ಮೊಹಬ್ಬತಿನ ಮಹಲಿಗೂ ಬೆಂಕಿ ಕೃತಿ ಬಿಡುಗಡೆ

ರಾಯಚೂರು ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸುದೀಕ್ಷಾ ಪ್ರಕಾಶನದ ವತಿಯಿಂದ ಮೊಹಬ್ಬತಿನ ಮಹಲಿಗೂ ಬೆಂಕಿ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಏ.5 ರಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದೆಂದು ಪ್ರಕಾಶನದ ಸಂಸ್ಥಾಪಕ ಹಾಗೂ ಕೃತಿಕಾರ ಮಹಾಂತೇಶ ಬಿರಾದಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊಹಬ್ಬತಿನ ಮಹಲಿಗೂ ಬೆಂಕಿ ನನ್ನ ಚೊಚ್ಚಲ ಕೃತಿಯಾಗಿದ್ದು, ಕೃತಿ ಲೋಕಾರ್ಪಣೆಯಲ್ಲಿ ವಿವಿಧ ಶಾಲೆಯ ಶಿಕ್ಷಕಿಯರಿಗೆ ವಿದ್ಯಾಧಾತೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ವೆಂಕಟೇಶ ಉದ್ಘಾಟಿಸಲಿದ್ದಾರೆ. ಪುಸ್ತಕ ಲೋಕಾರ್ಪಣೆಯನ್ನು ಇಲಕಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಹಾಗೂ ಕವಿ ಆರೀಫ್ ರಾಜಾ ನೆರವೇರಿಸಲಿದ್ದು, ಕಥೆಗಾರ ಶರಣಬಸವ.ಕೆ.ಗುಡದಿನ್ನಿ ಪುಸ್ತಕ ಪರಿಚಯ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಡಾ.ಬಿ.ವಿಜಯರಾಜೇಂದ್ರ ವಹಿಸಿಕೊಳ್ಳಲಿದ್ದಾರೆ.
ಜಿಲ್ಲೆಯ ಸಾಹಿತಿಗಳು, ಕವಿಗಳು ಕಾರ್ಯಕ್ರಮದ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದರು. ವಿದ್ಯಾಧಾತೆ ಪ್ರಶಸ್ತಿ ಪ್ರದಾನ ನಗರ ಸಾಕ ಡಾ.ಶಿವರಾಜ ಪಾಟೀಲ್, ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಚಾಲನೆ ನೀಡಲಿದ್ದು, ಪ್ರಶಸ್ತಿಯನ್ನು ಎಂಎಲ್ಸಿಗಳಾದ ಎ.ವಸಂತಕುಮಾರ, ಶರಣಗೌಡ ಬಯ್ಯಪೂರ, ಶಾಸಕಿ ಜಿ.ಕರೆಮ್ಮ ನಾಯಕ ಸೇರಿ ಅಧಿಕಾರಿಗಳು ಪ್ರದಾನ ಮಾಡಲಿದ್ದಾರೆ ಎಂದರು.
ಹಿರಿಯ ಉಪನ್ಯಾಸಕ ಸುಖದೇವ, ಶಿಕ್ಷಕಿಯರಾದ ಸಬಿಹಾ ನಿಖತ್ ಹಾಗೂ ಮಹಾಲಕ್ಷ್ಮೀ ಅವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಲಾಗುತ್ತದೆ. ಉಳಿದ ಜಿಲ್ಲೆ ಮತ್ತು ತಾಲೂಕಿನ ಶಿಕ್ಷಕಿಯರಿಗೆ ವಿದ್ಯಾಧಾತೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರತಿಭಾ ಗೋನಾಳ, ಪ್ರಮುಖರಾದ ನಂದೀಶ, ಸಂತೋಷ ನಂದಿನಿ, ಧನಲಕ್ಷ್ಮೀ, ರಾಘವೇಂದ್ರ, ರಾಜಶೇಖರ ಇದ್ದರು.