ಶಿವಾನಂದ ಪಾಟೀಲ್ 
ರಾಯಚೂರು

ಜಮೀನು ನೀಡಿದರೆ ಸಿಂಧನೂರಲ್ಲಿ ಜವಳಿ ಪಾರ್ಕ್

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್‌ನಲ್ಲಿ ಸಚಿವ ಶಿವಾನಂದ ಪಾಟೀಲ್ ಹೇಳಿಕೆ
ರಾಯಚೂರು: ಸಿಂಧನೂರು ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಅಧೀನದಡಿ ಸುಮಾರು 7500 ಎಕರೆ ಭೂಮಿಯಿದೆ. ಸರ್ಕಾರ 15 ಎಕರೆಯನ್ನು ಇಲಾಖೆಗೆ ನೀಡಿದರೆ ಜವಳಿ ಪಾರ್ಕ್ ಸ್ಥಾಪನೆ ಬೇಡಿಕೆ ಕುರಿತು ಪರಿಶೀಲಿಸಲಾಗುವುದು ಎಂದು ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. 
ವಿಧಾನ ಪರಿಷತ್‌ನಲ್ಲಿ ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಎಂಎಲ್ಸಿ ಬಸನಗೌಡ ಬಾದರ್ಲಿ ಪ್ರಶ್ನೆಗೆ ಉತ್ತರ ನೀಡಿದರು. ಜವಳಿ ಪಾರ್ಕ್ ಸ್ಥಾಪನೆಗೆ 15 ಎಕರೆ ಭೂಮಿ ಗುರುತಿಸಿ ಇಲಾಖೆಗೆ ಹಸ್ತಾಂತರಿಸಲು ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ. 
ಆದರೆ, ಒಂದೇ ಕಡೆ 15 ಎಕರೆ ಸರ್ಕಾರದ ಭೂಮಿ ಲಭ್ಯವಿಲ್ಲ. ಉದ್ಯೋಗ ಅರಸಿ ಸಿಂಧನೂರು ತಾಲೂಕಿನ ಯುವಜನತೆ ರಾಜ್ಯದ ವಿವಿಧ ಸ್ಥಳಗಳಿಗೆ ವಲಸೆ ಹೋಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಜವಳಿ ಪಾರ್ಕ್ ಸ್ಥಾಪನೆ ಮಾಡಿದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಪಾರ್ಕ್ ನಿರ್ಮಿಸಲು ಅಗತ್ಯ ಸರ್ಕಾರದ ಭೂಮಿ ತಾಲೂಕಿನಲ್ಲಿ ಇಲ್ಲ. 
ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ಭೂಮಿ ಲಭ್ಯವಿದ್ದು, ಜವಳಿ ಪಾರ್ಕ್ ಸ್ಥಾಪನೆಗೆ ಮಂಜೂರು ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದು. ಕೇಂದ್ರ ಸರ್ಕಾರ ಭೂಮಿ ಒದಗಿಸಿದರೆ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.