ದೇವದುರ್ಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ ಕಾರ್ಯಕ್ರಮವನ್ನು ಶಾಸಕಿ ಕರೆಮ್ಮ ನಾಯಕ ಉದ್ಘಾಟಿಸಿದರು. ಯರಮರಸ್ ಡಯಟ್ ಕಾಲೇಜು ಉಪನಿರ್ದೇಶಕ ಚಂದ್ರಶೇಖರ, ಬಿಇಒ ಮಲ್ಲಿಕಾರ್ಜುನ, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ಅರಕೇರಾ ತಾಪಂ ಇಒ ಅಣ್ಣಾರಾವ್ ನಾಯಕ, ಫಾ.ಟೋಮಿ, ಪ್ರಮುಖರಾದ ಹನುಮಂತ್ರಾಯ ಶಾಖೆ, ಎಂ.ವಿ.ಕವಡಿಮಟ್ಟ, ರಂಗನಾಥ, ಹೊನ್ನಪ್ಪ, ಬಸವರಾಜ ಕಟ್ಟಿಮನಿ, ಶರಣಗೌಡ ಸುಂಕೇಶ್ವರಹಾಳ, ಮಂಜುನಾಥ ಇತರರಿದ್ದರು.
- ಕಲಿಕೋತ್ಸವ
- ಕಾರ್ಯಕ್ರಮ
- ಸರ್ವತೋಮುಖ
ದೇವದುರ್ಗ: ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನೆರವಾಗುತ್ತವೆ. ಮಕ್ಕಳು ಸಕ್ರಿಯವಾಗಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಬೇಕು ಎಂದು ಶಾಸಕಿ ಕರೆಮ್ಮ ಜಿ. ನಾಯಕ ಹೇಳಿದರು.
ಜಿಲ್ಲಾಡಳಿತ, ಜಿಪಂ ಮತ್ತು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯಿಂದ ಪಟ್ಟಣದ ಡಾನ್‌ಬಾಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾ ಕಾರಂಜಿ ಮಕ್ಕಳ ಕೌಶಲ ಪ್ರದರ್ಶನ ಮಾಡುವ ವೇದಿಕೆಯಾಗಿದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಶಿಕ್ಷಕರು ಗುರುತಿಸಿ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕು. ಶಾಲಾ ಶಿಕ್ಷಣ ಮಕ್ಕಳಿಗೆ ಬುನಾದಿ ಇದ್ದಂತೆ. ಶಿಕ್ಷಕರು ಸರಿಯಾದ ಮಾರ್ಗ ತೋರಿಸಿ ಅವರನ್ನು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ರೂಪಿಸಬೇಕು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ವಿವಿಧ ಯೋಜನೆ ಜಾರಿಗೆ ತಂದಿದೆ. ಪ್ರತಿಭಾ ಕಾರಂಜಿ ಅಂಥ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು.ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನನ್ನ ಅವಧಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಜನರು ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೇಳಿದರು.