ಗುರುಂಟಾದಲ್ಲಿ ಆಯೋಜಿಸಿದ್ದ ಹಿಂದೂ ಸಮಾವೇಶವನ್ನು ವಾಗ್ಮಿ ಹಾರಿಕಾ ಮಂಜುನಾಥ ಉದ್ಘಾಟಿಸಿದರು. ದೇವರಭೂಪೂರಿನ ಬೃಹನ್ಮಠದ ಶ್ರೀ ಗಜದಂಡ ಶಿವಾಚಾರ್ಯರು ಹಾಗೂ ಸಂಸ್ಥಾನಿಕ ರಾಜಾ ಸೋಮನಾಥನಾಯಕ ಇತರರಿದ್ದರು.
- ವಾಗ್ಮಿ ಹಾರಿಕಾ ಮಂಜುನಾಥ ಸಲಹೆ
- ಗುರುಗುಂಟಾದಲ್ಲಿ ಹಿಂದೂ ಸಮಾವೇಶ
ಗುರುಗುಂಟಾ: ಪ್ರತಿಯೊಬ್ಬ ನಾಗರಿಕನ ಕಾರ್ಯಕ್ಷೇತ್ರ ಯಾವುದೇ ಇರಲಿ ಜಾತಿ-ಮತ, ಪಂಥ-ಪಂಗಡಗಳನ್ನು ಮನೆಗೆ ಸೀಮಿತಗೊಳಿಸಿ ನಾವೆಲ್ಲರೂ ಹಿಂದೂ ಎಂಬ ಭಾವನೆ ಇದ್ದರೆ ಮಾತ್ರ ಸನಾತನ ಧರ್ಮ ಸಂರಕ್ಷಿಸಲು ಸಾಧ್ಯ ಎಂದು ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.
ಇಲ್ಲಿನ ರಂಗಮಂದಿರದಲ್ಲಿ ಹಿಂದೂ ಸಮ್ಮೇಳನ ಸಮಿತಿಯಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 300 ವರ್ಷಗಳಿಂದಲೂ ಬಹುಸಂಖ್ಯಾತ ಪರಕೀಯರ ಕಿರುಕುಳದಿಂದ ನೆಲೆಕಂಡ ಆರು ದೇಶ, ನಾಲ್ಕು ರಾಜ್ಯಗಳನ್ನು ಬಿಟ್ಟು ನಾವು ನಮ್ಮ ದೇಶ ಸೇರಿದ್ದೇವೆ.
ದೇಶ, ಧರ್ಮದ ವಿಚಾರದಲ್ಲಿ ನಿರಾಸಕ್ತಿ, ಅಸಡ್ಡೆ ತೋರಿದರೆ ನೆಲೆಕಾಣಲು ನಮಗೆ ಬೇರೊಂದು ದೇಶವಿಲ್ಲ. ಧರ್ಮ ರಕ್ಷಣೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ರಾಜ, ಮಹಾರಾಜರ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಬೇಕು. ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ತಿಳಿಸಬೇಕು. ಅವರನ್ನ್ನು ದೇಗುಲ, ಮಠಗಳಿಗೆ ಕರೆದೊಯ್ಯಬೇಕು. ವಿಭೂತಿ, ಭಂಡಾರ, ಕುಂಕುಮ, ಗಂಧಗಳನ್ನು ಹಚ್ಚಿ, ಹೆಗಲಿಗೆ ಕೇಸರಿ ಶಾಲು ಧರಿಸುವ ಸಂಪ್ರದಾಯ ಜೀವಂತವಾಗಿರಿಸಬೇಕು. ಆರೆಸ್ಸೆಸ್ ಏನು ಮಾಡಿದೆ ಎಂದು ಪ್ರಶ್ನಿಸುವವರು ಸಂಘದ ಕಾರ್ಯವೈಖರಿಯನ್ನು ನೋಡಬೇಕು ಎಂದರು.
ಸಾನ್ನಿಧ್ಯವಹಿಸಿದ್ದ ದೇವರಭೂಪೂರಿನ ಬೃಹನ್ಮಠದ ಗಜದಂಡ ಶಿವಾಚಾರ್ಯರು ಹಾಗೂ ಸಂಸ್ಥಾನಿಕ ರಾಜಾ ಸೋಮನಾಥನಾಯಕ, ಮುಖಂಡ ಅಮರನಾಯಕ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಬಸ್ ನಿಲ್ದಾಣದಿಂದ ರಂಗಮಂದಿರದವರೆಗೆ ಶೋಭಾಯಾತ್ರೆ ನಡೆಯಿತು. ಎಎಸ್ಪಿ ಕುಮಾರಸ್ವಾಮಿ ನೇತೃತ್ವದಲ್ಲಿ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಪಿಐಗಳಾದ ಶಿವಾನಂದ ಸಜ್ಜನ್, ಹೊಸಕೇರಪ್ಪ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು. ಡಿಆರ್ ತುಕಡಿ ಇತ್ತು.