ಮಾನ್ವಿ ಪುರಸಭೆ ವ್ಯವಸ್ಥಾಪಕ ನರಸಿಂಹಲುಗೆ 16ನೇ ವಾರ್ಡ್ ನಿವಾಸಿಗಳು ಮನವಿ ಸಲ್ಲಿಸಿದರು.
ಮಾನ್ವಿ: ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ಚರಂಡಿ ನೀರು ರಾಜಕಾಲುವೆ ಬದಲಿಗೆ ರಸ್ತೆ ಮೇಲೆ ಹರಿಯುತ್ತಿದ್ದು, ಪುರಸಭೆ ಅಧಿಕಾರಿಗಳು ಚರಂಡಿ ನೀರು ರಾಜಕಾಲುವೆಗೆ ಹರಿಯುವಂತೆ ಕ್ರಮವಹಿಸಬೇಕೆಂದು ನಿವಾಸಿಗಳು ಒತ್ತಾಯಿಸಿದರು.
ಈ ಕುರಿತು ಪುರಸಭೆ ವ್ಯಸವಸ್ಥಾಪಕ ನರಸಿಂಹಲುಗೆ ಸೋಮವಾರ ಮನವಿ ಸಲ್ಲಿಸಿದರು. ವಾರ್ಡ್ ನಂ.16 ರಲ್ಲಿ ನಾಲಾ ರೋಡ್ ನಿಂದ ಬರುವ ಚರಂಡಿ ನೀರು ಹಾಗೂ ಸಿಮೆಂಟ್ ರೋಡ್‌ನಿಂದ ದೌಲಪ್ಪ ಮನೆ ಮಾರ್ಗವಾಗಿ ಬರುವ ಹಿರೇಬಾವಿಯ ನೀರು ರಸ್ತೆ ಮೇಲೆ ಹರಿದು ಹೋಗುತ್ತಿದೆ. ಕೆಲವರು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಚರಂಡಿ ನೀರು ಸರಿಯಾಗಿ ಹರಿಯುತ್ತಿಲ್ಲ ಎಂದು ತಿಳಿಸಿದರು.
ಮಳೆಗಾಲ ಹಿನ್ನೆಲೆಯಲ್ಲಿ ನಾಲಾ ರಸ್ತೆಯ ನೀರು ರಾಜಕಾಲುವೆಗೆ ಹರಿದು ಹೋಗಬೇಕು, ಕಡಿದಾದ ಚರಂಡಿ ನಿರ್ಮಾಣ ಮಾಡಿರುವುದರಿಂದ ರಾಜಕಾಲುವೆಗೆ ನೀರು ಹರಿಯದೆ ಕಾಲುವೆ ಪಕ್ಕದಲ್ಲಿನ ಮನೆಯೊಳಗೆ ನೀರು ನುಗ್ಗುವುದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ನಿವಾಸಿಗಳಾದ ಬಸವರಾಜ, ರಾಮಕುಮಾರ, ಕೆ.ಇ.ನರಸಿಂಹ, ಅಫ್ಸರ್, ಸಲೀಂ, ವೀರೇಶ, ಹುಸೇನ್ ಸಾಬ್, ಆಂಜನೇಯ, ಸಾವಿತ್ರಿ, ಪಾರ್ವತಮ್ಮ, ನಾಗಪ್ಪ, ವಿಜಯಲಕ್ಷ್ಮೀ, ನಾಗರಾಜ ಇತರರಿದ್ದರು.