ಲಿಂಗಸುಗೂರಿನ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮವನ್ನು ಶಾಸಕ ಮಾನಪ್ಪ ವಜ್ಜಲ್ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಸಹಾಯಕ ಕೃಷಿ ನಿರ್ದೇಶಕಿ ಎನ್.ವಿಜಯಾಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ಮುಖಂಡ ರಾದ ಗಿರಿಮಲ್ಲನಗೌಡ, ಅಯ್ಯಪ್ಪ ಮಾಳೂರು, ವೆಂಕನಗೌಡ ಐದನಾಳ, ರಾಜು ಚವ್ಹಾಣ್ ಇತರರಿದ್ದರು.
- ಶಾಸಕ ಮಾನಪ್ಪ ವಜ್ಜಲ್ ಸಲಹೆ ಬಿತ್ತನೆ ಬೀಜ ವಿತರಣೆ
ಲಿಂಗಸುಗೂರು: ಭೂಮಿಯಲ್ಲಿ ಬಿತ್ತಿದ ಬೀಜ ಮೊಳಕೆಯಾದ ನಂತರ ಮಗುವಿನಂತೆ ಬೆಳೆಗಳನ್ನು ರೈತರು ಜೋಪಾನ ಮಾಡಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಜಿಪಂ, ಕೃಷಿ ಇಲಾಖೆ ಏರ್ಪಡಿಸಿದ್ದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಉತ್ತಮ ಮಳೆಯಾಗಿದ್ದರಿಂದ ಒಂಬತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಕೃಷಿ ಇಲಾಖೆಯವರು ಬೀಜಗಳನ್ನು ಪರೀಕ್ಷೆ ಮಾಡಿ ಪ್ರಮಾಣೀಕರಿಸಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡುತ್ತಿದ್ದಾರೆ. ರೈತರು ಜಮೀನಿನಲ್ಲಿ ಬೆಳೆದ ಬೆಳೆಗಳತ್ತ ಹೆಚ್ಚು ಗಮನ ಹರಿಸಬೇಕು. ಪಾಲನೆ ಪೋಷಣೆಯಿಂದ ಉತ್ತಮ ಫಸಲು ಪಡೆಯಬಹುದು. ರೈತರಿಗೆ ಸಮೃದ್ಧ ಮಳೆಯಾಗಿ ಉತ್ತಮ ಬೆಳೆ ದೊರಕಲಿ ಎಂದು ಹಾರೈಸಿದರು.
ಸಹಾಯಕ ಕೃಷಿ ನಿರ್ದೇಶಕಿ ಎನ್.ವಿಜಯಾಮೂರ್ತಿ ಮಾತನಾಡಿ, ಉತ್ತಮ ಮಳೆಯಾಗಿದ್ದು, ರೈತರು ಹೆಚ್ಚಿನ ಪ್ರಮಾಣ ದಲ್ಲಿ ತೊಗರಿ ಬಿತ್ತನೆ ಮಾಡಲು ಮುಂದಾಗಿದ್ದಾರೆ. ತೊಗರಿ, ಹೆಸರು, ಭತ್ತ, ಸಜ್ಜೆ, ಸೂರ್ಯಕಾಂತಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, ರೈತರು ಪಡೆಯಬೇಕು ಎಂದರು. ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ಮುಖಂಡರಾದ ಗಿರಿಮಲ್ಲನಗೌಡ, ಅಯ್ಯಪ್ಪ ಮಾಳೂರು, ವೆಂಕನಗೌಡ ಐದನಾಳ, ರಾಜು ಚವ್ಹಾಣ್, ಪರಮೇಶ ಯಾದವ, ಶಂಕರಗೌಡ ಬಳಗಾನೂರು, ಕೃಷಿ ಇಲಾಖೆ ಅಧಿಕಾರಿ ಅಮರೇಗೌಡ, ರೇವಣ್ಣ ಸಿದ್ದಯ್ಯ, ಸತೀಶ ಇದ್ದರು.