ಹಟ್ಟಿ ಪೊಲೀಸ್ ಠಾಣೆಯಲ್ಲಿ ಸಿಪಿಐ ಶಿವಾನಂದ ಗಾಣಿಗೇರಾಗೆ ಶ್ರೀರಾಮ ಸೇನೆ ಸಂಘಟನೆ ಮನವಿ ಸಲ್ಲಿಸಿತು. ಸಂಘಟನೆಯ ರಘುಗೌಡ ನಾಯಕ, ಮನೋಜ ಕುಮಾರ ಇದ್ದರು.
ಹಟ್ಟಿಚಿನ್ನದಗಣಿ: ಹಟ್ಟಿ ಚಿನ್ನದ ಗಣಿ ಕಂಪನಿಯ ಒಂದು ಸಾವಿರ ಮನೆಗಳ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಪಟ್ಟಣ ಸೇರಿ ವಿವಿಧ ಗ್ರಾಮಗಳಿಂದ ಜಲ್ಲಿಕಲ್ಲು, ಜಲ್ಲಿಕಲ್ಲಿನ ಪೌಡರ್ ಹಾಗೂ ಮರಂ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಲಾರಿಗಳ ಮೂಲಕ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ಸಂಘಟನೆಯಿಂದ ಗುರುವಾರ ಸಿಪಿಐ ಶಿವಾನಂದ ಗಾಣಿಗೇರಾಗೆ ಮನವಿ ಸಲ್ಲಿಸಿತು.
ಪ್ರತಿದಿನ ಹಲವು ಲಾರಿಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ (ಓವರ್‌ಲೋಡ್) ಮರಂ ಹಾಗೂ ಇತರ ಸಾಮಗ್ರಿ ಸಾಗಿಸಲಾಗುತ್ತಿದೆ. ಅತಿವೇಗದಲ್ಲಿ ಸಂಚರಿಸುವುದರಿಂದ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ರಸ್ತೆಗಳಲ್ಲಿ ಧೂಳು ಹೆಚ್ಚಾಗಿ ಮಾಲಿನ್ಯ ಉಂಟಾಗುತ್ತಿದೆ.
ಶಾಲಾ ಮಕ್ಕಳು, ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರಿಗೆೆ ಅಪಾಯವಿದೆ. ಆದ್ದರಿಂದ ಸಂಚಾರ ನಿಯಮ ಉಲ್ಲಂಘನೆ, ಅಕ್ರಮ ಸಾಗಣೆ ಹಾಗೂ ಓವರ್‌ಲೋಡ್ ವಾಹನಗಳ ವಿರುದ್ಧ ಪೊಲೀಸ್, ಸಾರಿಗೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಠಾಣೆ ಮುಂದೆ ಪ್ರತಿಭಟನೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆಯ ರಘುಗೌಡ ನಾಯಕ, ಮನೋಜ ಕುಮಾರ, ಎನ್.ಸಿ. ನಿಂಗಪ್ಪ, ಶಿವಕುಮಾರ ಇದ್ದರು.