ಸಿಂಧನೂರಿನ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕ ಬಸವರಾಜ ಕೊಂಕಲ್ ಉದ್ಘಾಟಿಸಿದರು. ಪ್ರಮುಖರಾದ ಚಂದ್ರಶೇಖರ, ಲಿಯಾಕತ್ ಅಲಿ, ಆದನಗೌಡ ಕಲ್ಲೂರು, ಗಾಯತ್ರಿ ವೈ. ಇತರರಿದ್ದರು. 
ರಾಯಚೂರು

ಸಿಸ್ಟಮ್ ಆಡಿಟ್ ಅರಿವು ಮುಖ್ಯ

ನರೇಶ್ ಕುಮಾರ್
ಸಿಂಧನೂರು: ಸಹಕಾರಿಯಲ್ಲಿ ಮ್ಯಾನುವಲ್ ನಗದು ಪುಸ್ತಕ ನಿರ್ವಹಣೆ ಜತೆಗೆ ಸಿಸ್ಟಮ್ ಆಡಿಟ್ ವಿಧಾನದ ಬಗ್ಗೆ ತಿಳಿಯುವುದು ಅತಿ ಮುಖ್ಯವಾಗಿದೆ ಎಂದು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕ ಬಸವರಾಜ ಕೊಂಕಲ್ ಹೇಳಿದರು. 
ನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ಶನಿವಾರ ಸಿಂಧನೂರು ಉಪವಿಭಾಗದ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗೆ ಲೆಕ್ಕ ಪರಿಶೋಧನೆಯ ಮಹತ್ವ, ಅವಶ್ಯಕತೆ ಹಾಗೂ ಸಾಲ ವಿರತಣೆ ಮತ್ತು ವಸೂಲಾತಿ ಕ್ರಮಗಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು. ಮ್ಯಾನುವಲ್ ಆಡಿಟ್‌ಗಿಂತ ಸಿಸ್ಟಮ್ ಆಡಿಟ್ ಬಹಳ ಸುಲಭವಾಗಿರುತ್ತದೆ. ಲೆಕ್ಕ ಪತ್ರ ಬರೆಯುವುದನ್ನು ಅಪಡೇಟ್ ಮಾಡಿಕೊಂಡು ಅಂದಿನ ಕೆಲಸವನ್ನು ಅಂದೇ ಮಾಡಿ ಮುಗಿಸುವುದು ಸೂಕ್ತ ಎಂದರು. 
ಸಹಕಾರ ಸಂಘಗಳ ಸಹಾಯಕ ನಿವೃತ್ತ ನಿಬಂಧಕ ಲಿಯಾಕತ್ ಅಲಿ ಮಾತನಾಡಿ, ಸಾಲ ಪಡೆದ ವ್ಯಕ್ತಿ ಸಕಾಲದಲ್ಲಿ ಸಾಲ ಮರುಪಾವತಿ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಎಡಿ ಚಂದ್ರಶೇಖರ, ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಆದನಗೌಡ ಕಲ್ಲೂರು ಮಾತನಾಡಿದರು.
ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ರಾಯಚೂರು-ಕೊಪ್ಪಳ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಸಿಂಧನೂರು ಶಾಖೆ, ಸಹಕಾರ ಇಲಾಖೆ, ವಿವಿದೊದ್ಧೇಶ ಮತ್ತು ಇತರ ವಿವಿಧ ಸಹಕಾರ ಸಂಘಗಳಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ ವೈ., ಆರ್‌ಡಿಸಿಸಿ ಬ್ಯಾಂಕ್ ಸಿಂಧನೂರು ಶಾಖಾ ವ್ಯವಸ್ಥಾಪಕ ಶರಣಪ್ಪ ಹಳೇಮನಿ, ಸಹಕಾರ ಇಲಾಖೆಯ ಮಲ್ಲಿಕಾರ್ಜುನ, ನಿರೀಕ್ಷಕ ಕಿರಣಕುಮರ್ ಇದ್ದರು.