ಅಂಕಲಿಮಠದಲ್ಲಿ ನಿರುಪಾದೀಶ್ವರ ಜಾತ್ರೆ ನಿಮಿತ್ತ ಅಕ್ಕಿಪಾಯಸ ಕಾರ್ಯಕ್ರಮದಲ್ಲಿ ಫಕಿರೇಶ್ವರ ಶ್ರೀಗಳು ದೊಡ್ಡ ಪಾತ್ರೆಯಲ್ಲಿ ಪ್ರಸಾದವನ್ನು ಕೈಯಿಂದ ಕಲಿಸಿದರು. ಬಸವರಾಜ ಶ್ರೀಗಳು, ಸಿದ್ಧಾರ್ಥ ಶ್ರೀಗಳು ಇತರರಿದ್ದರು. 
ರಾಯಚೂರು

ಬರಿಗೈಯಿಂದಲೇ ಸುಡುವ ಪ್ರಸಾದ ಕಲಿಸಿದ ಸ್ವಾಮೀಜಿ

ಮುದಗಲ್: ಸಮೀಪದ ಸುಕ್ಷೇತ್ರ ಅಂಕಲಿಮಠದಲ್ಲಿ ಸದ್ಗುರು ನಿರುಪಾದೀಶ್ವರ ಜಾತ್ರೋತ್ಸವ ನಿಮಿತ್ತ ಲಕ್ಷಾಂತರ ಭಕ್ತರ ಮಧ್ಯೆ ಅಕ್ಕಿಪಾಯಸ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನೆರವೇರಿತು. 
ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಬಗೆಬಗೆಯ ಹೂಗಳಿಂದ ಅಲಂಕಾರ, ಶಿವಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಸುಕ್ಷೇತ್ರ ಅಂಕಲಿಮಠದ ಆವರಣದಲ್ಲಿ ಪಲ್ಲಕ್ಕಿ ಉತ್ಸವ ಭಕ್ತ್ತಿಯಿಂದ ನೆರವೇರಿತು. 
ಬಳಿಕ ಅಂಕಲಿಮಠದ ಕಿರಿಯ ಶ್ರೀ ಫಕಿರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಕ್ತಗಣಕ್ಕೆ ಸಿದ್ಧಪಡಿಸಿದ ಪ್ರಸಾದದ ಅಕ್ಕಿಪಾಯಸ ಕಾರ್ಯಕ್ರಮ ಜರುಗಿತು. ಸುಡುವ ಅಕ್ಕಿ ಪಾಯಸ, ಅನ್ನ, ಸಾಂಬಾರ್‌ನ ದೊಡ್ಡ ಪಾತ್ರೆಯಲ್ಲಿ ಶ್ರೀಗಳು ಬರಿಗೈಯಿಂದಲೇ ಪ್ರಸಾದವನ್ನು ಕಲಿಸುವ ಮೂಲಕ ಧಾರ್ಮಿಕ ಪರಂಪರೆ ಮುಂದುವರೆಸಿ, ಭಕ್ತರನ್ನು ಮಂತ್ರಮುಗ್ಧರನ್ನಾಗುವಂತೆ ಮಾಡಿದರು. ನಂತರ ಭಕ್ತರು ಜಯಘೋಷ ಹಾಕಿದರು. 
ಪಕ್ಕದ ಜಿಲ್ಲೆ, ರಾಜ್ಯಗಳಿಂದಲೂ ಅಸಂಖ್ಯಾತ ಭಕ್ತರು ಭಾಗವಹಿಸಿ ಇಷ್ಟಾರ್ಥ ಸಿಧ್ಧಿಗಾಗಿ ಪ್ರಾರ್ಥಿಸಿ ಹರಕೆ ಕಟ್ಟಿದರು. ಅಂಕಲಿಮಠದ ಬಸವರಾಜ ಶ್ರೀಗಳು, ಸಿದ್ಧಾರ್ಥ ಶ್ರೀಗಳು, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ, ಪ್ರಮುಖರಾದ ಸೂಗಣ್ಣ ಬಾಳೇಕಾಯಿ, ರುದ್ರಗೌಡ ತುರಡಗಿ, ನಾಗನಗೌಡ ತುರಡಗಿ, ತುರ್ವಿಹಾಳದ ಅಮರಗುಂಡ ದೇವರು ಇತರರಿದ್ದರು.